ವಿಜಯಸಾಕ್ಷಿ ಸುದ್ದಿ, ಗದಗ
ಗದಗ-ಬೆಟಗೇರಿ ಅವಳಿ ನಗರದಲ್ಲಿ ರೌಡಿ ಶೀಟರ್‌ಗಳ, ಪುಡಿ ರೌಡಿಗಳ ಹಾವಳಿ ಎಲ್ಹೆ ಮೀರಿದೆ. ಎಲ್ಲೆಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಎದುರಿನವರನ್ನು ಮನಬಂದಂತೆ ಥಳಿಸುತ್ತಿದ್ದಾರೆ. ಬೆಟಗೇರಿಯಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಅಮಾಯಕ ಟ್ರ‍್ಯಾಕ್ಟರ್ ಚಾಲಕನೊಂದಿಗೆ ಕ್ಯಾತೆ ತೆಗೆದು, ಹಲ್ಲೆ ಮಾಡಿದ್ದಾರೆ.
ಜಗಳ ಬಗೆಹರಿಸಲು ಮಧ್ಯೆ ಪ್ರವೇಶಿಸಿದ ಮಾಜಿ ಸೈನಿಕನ ಮೇಲೆಯೂ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾರೆ. ನಾನು ಓರ್ವ ಮಾಜಿ ಸೈನಿಕ ಎಂದು ಹೇಳುತ್ತಿದ್ದರೂ ರೌಡಿ ಶೀಟರ್ ಗ್ಯಾಂಗ್ ಹಲ್ಲೆ ಮಾಡಿ ಪರಾರಿಯಾಗಿದೆ. ರೌಡಿಗಳ ಪುಂಡಾಟಿಕೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವಳಿ ನಗರದ ಜನತೆ ಬೆಚ್ಚಿಬಿದ್ದಿದೆ.
ಕಳೆದ ವಾರವಷ್ಟೇ ಕ್ಷುಲ್ಲಕ ಕಾರಣಕ್ಕೆ ಪುಡಿ ರೌಡಿಗಳು ನಾಲ್ಕು ಜನರಿಗೆ ಚೂರಿ ಇರಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಬೆಟಗೇರಿಯಲ್ಲಿ ಮತ್ತೆ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ.
ಗದಗ ತಾಲೂಕಿನ ನೀರಲಗಿ ಗ್ರಾಮದ ರೈತ ಶರಣಪ್ಪಗೌಡ ಹಿರೇಗೌಡರ್ ಎನ್ನುವಾತ ಡಿಸೇಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ ಗೆ ಬಂದಿದ್ದಾಗ, ಟ್ತ್ಯಾಕ್ಟರ್ ಅವರಿಗೆ ತಾಕದಿದ್ದರೂ ಕೂಡ ನಮ್ಮ ಮೇಲೆ ಟ್ರ‍್ಯಾಕ್ಟರ್ ಹಾಯಿಸ್ತಿಯಾ ಎಂದು ಜಗಳ ತೆಗೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಟ್ರ‍್ಯಾಕ್ಟರ್ ಚಾಲಕ, ಮಾಲೀಕ ಹಾಗೂ ಮಾಜಿ ಯೋಧರಾದ ಶ್ರೀನಿವಾಸ್ ವಾಲ್ಮೀಕಿ ಸ್ಥಳಕ್ಕೆ ಬಂದಿದ್ದಾರೆ. ವಿಚಾರಿಸುತ್ತಿರುವಾಗ, ಏಕಾಏಕಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಈ ವೇಳೆ ನಾನು ಮಾಜಿ ಸೈನಿಕನಿದ್ದೇನೆ, ಕೈಮಾಡಬೇಡಿ ಎಂದರೂ ಕೇಳದ ನಾಗರಾಜ್ ಭಜಂತ್ರಿ, ಶ್ರೀಕಾಂತ ಭಜಂತ್ರಿ, ರಾಜು ಭಜಂತ್ರಿ ಸೇರಿದಂತೆ, ಆರೇಳು ಜನರ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಚಾಲಕ ಹಾಗೂ ಮಾಜಿ ಸೈನಿಕ ಪುಡಿ ರೌಡಿಗಳ ಹಲ್ಲೆಯಿಂದ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುಡಿ ರೌಡಿಗಳ ಅಟ್ಟಹಾಸ ಪೆಟ್ರೋಲ್ ಬಂಕ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳನ್ನು ಆಧರಿಸಿ, ರೌಡಿಗಳ ಗ್ಯಾಂಗ್‌ನ ರೌಡಿ ಶೀಟರ್ ರಾಜು ಭಜಂತ್ರಿ ಸೇರಿದಂತೆ ನಾಲ್ವರನ್ನು ಬೆಟಗೇರಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಮುಖ ಆರೋಪಿಗಳಾದ ನಾಗರಾಜ್ ಭಜಂತ್ರಿ, ಶ್ರೀಕಾಂತ್ ಭಜಂತ್ರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿದ್ದಕ್ಕೆ, ಮಾಜಿ ಸೈನಿಕರ ಸಂಘ ಈ ಘಟನೆ ಖಂಡಿಸಿದ್ದು, ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಮಾರ್ಗವಾಗಿ ಸಂಚರಿಸುವ ರೈತರು, ವಾಹನ ಸವಾರರ ಜೊತೆಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದು ಹಣ ವಸೂಲಿ ಮಾಡುತ್ತಿದ್ದಾರೆ. ಇಂಥ ಪ್ರಕರಣಗಳು ನಡೆಯದಂತೆ ಕಡಿವಾಣ ಹಾಕಬೇಕೆಂದು ಗಾಯಾಳು ಚಾಲಕ ಶರಣಪ್ಪಗೌಡ ಒತ್ತಾಯಿಸಿದ್ದಾರೆ.