ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್…….
ವಿಜಯಸಾಕ್ಷಿ ಸುದ್ದಿ, ಗದಗ
ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಇವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಚುನಾವಣಾಧಿಕಾರಿಗಳಿಂದ ಪರವಾನಗಿ ಪಡೆದುಕೊಳ್ಳದೇ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಗಾಂಧಿನಗರ ಸೆಟ್ಲಮೆಂಟ್‌ನ ಸಲೀಮ್ ಬುಡ್ನೇಸಾಬ ಕೊಣ್ಣೂರ ಇವರು ಏ.17ರಂದು ಮಧ್ಯಾಹ್ನ 12-30ರಿಂದ 3 ಗಂಟೆಯವರೆಗಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಿರುವ ನಿಲುವಂಗಿಯನ್ನು ಧರಿಸಿ ಪ್ರಚಾರ ನಡೆಸಿದ್ದರು.
ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿಯವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಕೆಎ.26, ಇಬಿ.2013 ಮೋಟಾರ್ ಸೈಕಲ್ ಸವಾರ, ಕೆಎ.26-8714 ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕ ಹಾಗೂ ಪ್ಯಾಸೆಂಜರ್ ಆಟೋ ರಿಕ್ಷಾ ಕೆಎ.26, ಬಿ.0255 ವಾಹನಗಳ ಚಾಲಕರು ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ.
ಹಾಗಿದ್ದರೂ, ತಮ್ಮ ವಾಹನಗಳಿಗೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಏ.18ರ ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.
ಇದು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಸದರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗದಗ ಶಹರ ವಿಧಾನಸಭಾ ಕ್ಷೇತ್ರದ ಎಫ್‌ಎಸ್‌ಟಿ ಅಧಿಕಾರಿ ಚನ್ನಕೇಶವ ಹನುಮಂತಪ್ಪ ಮುದಗಲ್ ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಧಿಕಾರಿಗಳ ದೂರನ್ನು ಸ್ವೀಕರಿಸಿರುವ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.