ಅನಿಲ ಮೆಣಸಿನಕಾಯಿ ಸೋಲಿಗೆ ಕಾರಣ ಯಾರು?
‘ಕೆಲವೆಡೆ ನಮ್ಮವರೇ ನಮ್ಮನ್ನು ಸೋಲಿಸಿದರು!
ವಿಜಯಸಾಕ್ಷಿ ಸುದ್ದಿ, ಗದಗ:
‘ರಾಜಕಾರಣದಲ್ಲಿ ಸೋಲು ಗೆಲುವು ಎರಡು ಶಾಶ್ವತವಲ್ಲ. ಸೋತರೂ ಚುನಾವಣೆ ಮಾಡಬೇಕು. ಏಕೆಂದರೆ, ರಾಜಕೀಯ ಜೀವನದಲ್ಲಿ ಸಾಕಷ್ಟು, ಸೋಲು, ಗೆಲುವು ಕಂಡಿರುವ ನಾನು ಸೋತವರಿಗೆ ಉತ್ತಮ ಉದಾಹರಣೆ. ಆದರೆ, ನಗರಸಭೆ ಚುನಾವಣೆಯಲ್ಲಿ ಕೆಲವು ವಾರ್ಡ್‌ಗಳಲ್ಲಿ ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಸೋಮವಾರ ನಗರದ ವಿಠ್ಠಲಾರೂಢ ಸಭಾಭವನದಲ್ಲಿ ನಡೆದ ನೂತನ ನಗರಸಭೆ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಗರಸಭೆ ಚುನಾವಣೆ ವೇಳೆ ಕೆಲವೆಡೆ ನಮ್ಮ ಕಾರ್ಯಕರ್ತರು ಪ್ರಚಾರ ಮಾಡಲು ಮುಕ್ತ ಅವಕಾಶ ಇರಲಿಲ್ಲ. ಅಂತಹ ಕಡೆಯೂ, ಮತದಾರರು ನಮ್ಮ ಪಕ್ಷಕ್ಕೆ ಮತ ನೀಡಿದ್ದಾರೆ. ಹೀಗಾಗಿ ಗೂಂಡಾಗಿರಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.
‘ಕೆಲ ಸದಸ್ಯರು ಈಗಾಗಲೇ ಕೆಲಸ ಕಾರ್ಯಗಳನ್ನು ಆರಂಭಿಸಿದ್ದು, ಅಭಿನಂದನೀಯ. ಆದರೆ, ಇದು ಆರಂಭಿಕ ಶೂರತ್ವ ಆಗಬಾರದು. ಸರ್ಕಾರ, ಸಚಿವರು, ಶಾಸಕರು ನಮ್ಮವರಿರುವಾಗ ಕಡು ಬಡವರಿಗೆ ಅನುಕೂಲ ಕಲ್ಪಿಸಬೇಕು. ಕಾರ್ಯಕರ್ತರ ಶ್ರಮ ಮತ್ತು ಬೆಂಬಲದೊಂದಿಗೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಮನೆ ಮನೆಗೆ ತೆರಳಿ, ಕಾಂಗ್ರೆಸ್ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಗೆಲುವಿಗೆ ಶ್ರಮಿಸಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದುವುದನ್ನು ಬಿಜೆಪಿ ತನ್ನ ಸಾಮರ್ಥ್ಯದಿಂದ ತೋರಿಸಿಕೊಟ್ಟಿದ್ದು, ಕಾಂಗ್ರೆಸ್‌ನ ವಿಫಲತೆ ನಮ್ಮ ಸ್ಪಷ್ಟತೆಯಿಂದಾಗಿ ಗೆಲುವು ಸಿಕ್ಕಿದೆ. ಹೀಗಾಗಿ ವಾರ್ಡ್‌ನ ಆದ್ಯತೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ಜಿಲ್ಲೆಯ ರೋಣ, ನರಗುಂದ ಹಾಗೂ ಶಿರಹಟ್ಟಿಯಲ್ಲಿ ಪಕ್ಷ ತೀರ್ಮಾನಿಸುವ ಅಭ್ಯರ್ಥಿ ಪರ ಚುನಾವಣೆ ಮಾಡುತ್ತೇವೆ. ಆದರೆ, ಗದಗಿನಲ್ಲಿ ಚುನಾವಣೆ ಮಾಡುವುದು ಸುಲಭವಲ್ಲ. ನಮ್ಮಲ್ಲಿನ ಅಸಮಾಧಾನ, ಒಮ್ಮತವಿಲ್ಲದ ಕಾರಣ ಕಳೆದ ಎರಡು ಬಾರಿ ಅನಿಲ್ ಮೆಣಸಿನಕಾಯಿ ಸೋತಿದ್ದಾರೆ ಎಂದರು.
‘ಗದಗನಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ನಗರ ಹಾಗೂ ಗ್ರಾಮೀಣ ಭಾಗದ ಕಟ್ಟ ಕಡೆಯ ಕಾರ್ಯಕರ್ತನ ಅಪೇಕ್ಷೆಯಾಗಿತ್ತು. ಅದರಂತೆ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಪಕ್ಷದ ಮತ್ತೊಬ್ಬರಿಗೆ ಅವಕಾಶ ಸಿಕ್ಕಿದ್ದರೆ, ಅದು ನಮಗೆ ಸಿಕ್ಕಿದೆ ಎಂದು ಭಾವಿಸಬೇಕು. ಅಲ್ಲದೇ, ಪಕ್ಷ ನಿಷ್ಠೆ ಹೊಂದುವ ಮೂಲಕ ಜನರ ಜೊತೆ ನಿಕಟ ಸಂಪರ್ಕ ಹೊಂದಿರಬೇಕು. ಜನರ ಸಮಸ್ಯೆಗಳಿಗೆ ಹಂತ ಹಂತವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ‘ಮಿಷನ್-24 ವಾರ್ಡಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿತ್ತು. ಆದರೆ, 18ರಲ್ಲಿ ಗೆದ್ದಿದ್ದರೂ ತೃಪ್ತಿ ನೀಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆದ್ದವರು ಹಿಗ್ಗಬಾರದು. ಸೋತವರು ಕುಗ್ಗಬಾರದು. ಜಯ ಸಾಧಿಸಿದವರು, ಪರಾಭಾವಗೊಂಡವರು ಒಟ್ಟಾಗಿ ವಾರ್ಡ್‌ಗಳಲ್ಲಿ ಕೆಲಸ ಮಾಡಬೇಕು. ಗೆಲುವಿಗೆ ಕಾರಣಾರಾಗಿರುವ ಜನರಿಗೆ ಕೊಟ್ಟ ಮಾತನ್ನು ಈಡೇರಿಸುವ ಮೂಲಕ ಸಚಿವರ ಗೌರವವನ್ನು ಹೆಚ್ಚಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಎಂ.ಎಸ್.ಕರಿಗೌಡ್ರ, ರಾಜು ಕುರುಡಗಿ, ಭೀಮಸಿಂಗ್ ರಾಥೋಡ, ರವಿ ದಂಡಿನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ ಸೇರಿದಂತೆ ನೂತನ ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
‘ಪಕ್ಷದ ಶಾಲು ಕಾರ್ಯಕರ್ತರಿಗೆ ತಂದೆ-ತಾಯಿ ಇದ್ದಂತೆ. ಈ ಶಾಲು ಧರಿಸಿಕೊಂಡು ವಿರೋಧ ಮಾಡಿದರೆ, ವ್ಯಭಿಚಾರ ಮಾಡಿದಂತೆ ಎಂದ ಅವರು, ಸೋತವರು ಧೃತಿಗೆಡುವ ಅಗತ್ಯವಿಲ್ಲ. ಅವರೊಂದಿಗೆ ನಾವೀದ್ದೇವೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಜನರು ಗಟ್ಟಿಯಾಗಿ ನಿಂತು ಮತ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಬೇಕು.
ಸಿ. ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ