ಫೇಸ್‌ಬುಕ್‌ನಲ್ಲಿ ಶಾಸಕ ಬಂಡಿ, ಶೆಟ್ರ ಮಧ್ಯೆ ಕಮೆಂಟ್ ವಾರ್; ಇದು ನಿನಗೆ ಅನ್ವಯಿಸುತ್ತದೆ ಎಂದ ಕಳಕಪ್ಪಗೆ ತಿರುಗೇಟು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ ಜಿಲ್ಲಾ ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ತಾಳಮೇಳವಿಲ್ಲ ಎಂಬುವುದೇನು ಗುಟ್ಟಾಗಿ ಉಳಿದಿಲ್ಲ. ಆಗಾಗ್ಗೆ ಒಂದಿಲ್ಲ ಒಂದು ವಿಚಾರಕ್ಕೆ ಗದಗ ಜಿಲ್ಲಾ ಬಿಜೆಪಿ ನಾಯಕರು ಸುದ್ದಿಯಾಗುತ್ತಲೇ ಇರುತ್ತಾರೆ‌. ಮೋಹನ್ ಮಾಳಶೆಟ್ಟಿ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೇಲಂತೂ ಒಳಜಗಳ, ಬಣಜಗಳ ಮತ್ತಷ್ಟು ಬಿಗಡಾಯಿಸಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿ‌ ಬರುತ್ತಿವೆ.

ಹೌದು, ಇದಕ್ಕೆ ಪುಷ್ಠಿ ಎಂಬಂತೆ ಪೇಸ್ ಬುಕ್ ಪೇಜ್ ನಲ್ಲಿ ರೋಣ ಶಾಸಕ v/s ಗದಗ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರ ಮಧ್ಯೆ ಕಮೆಂಟ್ ವಾರ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಲಿ ಶಾಸಕರು ಮಾಜಿ ಜಿಲ್ಲಾಧ್ಯಕ್ಷರನ್ನು ಏಕವಚನದಲ್ಲಿಯೇ ಸಂಭೋದಿಸಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಗದಗ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮೋಹನ್ ಪಿ.ಮಾಳಶೆಟ್ಟಿಯವರು ‘ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ‌ ಮನಸ್ಸು ಮೆಲ್ಲನೆ ನುಡಿಯಿತು‌. ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆಂದು’ ಎಂಬ ಬರಹವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ.

ಮಾಜಿ ಜಿಲ್ಲಾಧ್ಯಕ್ಷರ ಈ ಪೋಸ್ಟ್ ಗೆ ರೋಣ ಶಾಸಕ ಕಳಕಪ್ಪ ಬಂಡಿ ಅವರು ‘ಇದು ನಿನಗೆ ಅನ್ವಯಿಸುತ್ತದೆ’ ಎಂದು ಮಾರ್ಮಿಕವಾಗಿ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಮೋಹನ್ ಮಾಳಶೆಟ್ಟಿಯವರು ಅಷ್ಟೇ ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ. ಬಂಡಿಯವರ ಕಮೆಂಟ್ ಗೆ ‘ಯಾರೆಲ್ಲಾ ಉರಿದುಕೊಳ್ಳುತ್ತಾರೋ ಅವರೆಲ್ಲರಿಗೂ ಅನ್ವಯಿಸುತ್ತದೆ ಸರ್’ ಎನ್ನುವ ಮೂಲಕ ಶೆಟ್ರು ತಿರುಗೇಟು‌ ನೀಡಿದ್ದಾರೆ. ಸದ್ಯ ಇವರಿಬ್ಬರ ನಡುವಿನ ಕ್ರಿಯೆ-ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಆನಂದ ಶ್ಯಾವಿ ಎನ್ನುವವರು ‘ಅಂತಿಮವಾಗಿ ಸತ್ಯ ಹೇಳಿದ್ರಿ. ಕೆಲವರಿಗೆ ಅರ್ಥ ಆಗಲ್ಲ ಅಷ್ಟೇ’ ಎಂದು ಕಮೆಂಟ್ ಮಾಡಿದ್ದರೆ, ಇನ್ನೂ ‌ಕೆಲವರು ನೀವು ಹೇಳಿದ್ದು ಸತ್ಯ ಎಂಬರ್ಥದಲ್ಲಿ ಕಮೆಂಟ್ ಮಾಡಿದ್ದಾರೆ.

ಇದಕ್ಕೆಲ್ಲಾ ಕಾರಣ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ‌ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಾದ ಬೆಳವಣಿಗೆಳು ಕಾರಣ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳಿಂದಲೇ ನೊಂದಿದ್ದರು ಎನ್ನಲಾದ ಮೋಹನ್ ಮಾಳಶೆಟ್ಟಿಯವರು ತಮ್ಮ ಅನಾರೋಗ್ಯದ ಕಾರಣವೊಡ್ಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಢೀರನೆ ರಾಜೀನಾಮೆ ಸಲ್ಲಿಸಿದ್ದರು. ಮಾಳಶೆಟ್ಟಿಯವರು ಈ ನಿರ್ಧಾರ ಕೆಲವರಿಗೆ ತಳಮಳ ಸೃಷ್ಟಿಸಿದ್ದರೆ, ವಿರೋಧಿ ಬಣಕ್ಕೆ ಸಂತೋಷವನ್ನುಂಟು ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಯಾರು ಊಹಿಸಿರದ ವ್ಯಕ್ತಿಯನ್ನು ಅಚ್ಚರಿಯಂಬಂತೆ ಗದಗ ಜಿಲ್ಲಾ‌ ಬಿಜೆಪಿಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ನೂತನ ಸಾರಥಿಯನ್ನಾಗಿ ರೋಣ ಮತಕ್ಷೇತ್ರದ ವೆಂಕನಗೌಡ(ಮುತ್ತಣ್ಣ) ಲಿಂಗನಗೌಡ್ರ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮೇ 25ರಂದು ನೇಮಕ ಮಾಡಿ ಆದೇಶಿಸಿದ್ದರು.

ಇದೇ ದಿನದಂದು ಮೋಹನ್ ಮಾಳಶೆಟ್ಟಿಯವರನ್ನು ಧಾರವಾಡ ಗ್ರಾಮಾಂತರ ಸಹ ಪ್ರಭಾರಿಯನ್ನಾಗಿ ನೇಮಿಸುವ ಮೂಲಕ ಹೊಸ‌ ಜವಾಬ್ದಾರಿ ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಶಕ್ತನಿಲ್ಲ ಎಂಬರ್ಥದಲ್ಲಿ ಅನಾರೋಗ್ಯದ ಸಮಸ್ಯೆ ಮುಂದಿಟ್ಟು ರಾಜೀನಾಮೆ ಸಲ್ಲಿಸಿದ ಮೋಹನ್ ಮಾಳಶೆಟ್ಟಿಯವರಿಗೆ ಗದಗ ಜಿಲ್ಲೆ ಬಿಟ್ಟು ಧಾರವಾಡ ಗ್ರಾಮಾಂತರದ ಸಹ ಪ್ರಭಾರಿಯನ್ನಾಗಿ ನೇಮಕಗೊಳಿಸಿ ಆದೇಶಿಸಿದ್ದು ಯಾಕೆ? ಎಂಬ ಪ್ರಶ್ನೆಗೆ ಇನ್ನೂವರೆಗೂ ಉತ್ತರವಿಲ್ಲ. ಮೇಲ್ನೋಟದಲ್ಲಿ ಮಾಳಶೆಟ್ಟಿಯವರ ಅಸಮಾಧಾನವನ್ನು ಶಮನಗೊಳಿಸಲು ರಾಜ್ಯಾಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ, ಗದಗ ಜಿಲ್ಲಾ ಬಿಜೆಪಿ ನಾಯಕರ ಮೇಲಿರುವ ಮೋಹನ್ ಮಾಳಶೆಟ್ಟಿಯವರ ಸಿಟ್ಟು, ಅಸಮಾಧಾನ ಪೇಸ್ ಬುಕ್‌ ಪೇಜ್ ರೋಷಾಗ್ನಿ ಹೊರಹೊಮ್ಮಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಒಟ್ಟಿನಲ್ಲಿ ಗದಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು‌ ಮತ್ತೊಮ್ಮೆ ಸಾಬೀತಾಗಿದ್ದು, ರಾಜ್ಯ ವಿಧಾನಸಭೆಗೆ‌ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಉದ್ಭವಿಸಿದೆ ಎನ್ನಲಾದ ಈ ಅಸಮಾಧಾನ ಶೀಘ್ರ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ.


Spread the love

LEAVE A REPLY

Please enter your comment!
Please enter your name here