ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ…..ಜನರ ನಾಡಿಮಿಡಿತದ ಜೊತೆ ಸಂಪರ್ಕ ಸಾಧಿಸಲು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು………
ವಿಜಯಸಾಕ್ಷಿ ಸುದ್ದಿ, ನವಲಗುಂದ
ಕ್ಷೇತ್ರದಲ್ಲಿ ಹಿಂದೆ ಏನು ಅಭಿವೃದ್ಧಿ ಕೆಲಸಗಳಾಗಿದ್ದವು, ಇಂದು ಏನಾಗಿದೆ ಹಾಗೂ ಮುಂದೆ ಭವಿಷ್ಯದಲ್ಲಿ ಬಿಜೆಪಿ ಕಂಡಂತ ಕನಸನ್ನು ಜನರ ಮನೆ ಮನೆ ಬಾಗಿಲಿಗೆ ತಲುಪಿಸಿ ಅವರ ನಾಡಿಮಿಡಿತದ ಜೊತೆ ಸಂಪರ್ಕ ಸಾಧಿಸಬೇಕೆಂದು ಜವಳಿ, ಸಕ್ಕರೆ ಹಾಗೂ ಕೈಮಗ್ಗ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ಶನಿವಾರ ಇಲ್ಲಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಎಂದರೆ ಅದು ಕಾರ್ಯಕರ್ತರ ಪಕ್ಷ, ಪ್ರತಿಭೆ ಇದ್ದವರು ಯಾರೇ ಪಕ್ಷಕ್ಕೆ ಬರಲಿ ಅವರನ್ನು ಮುಂದೆ ಹಾಕಿಕೊಂಡು ನಾವು ಹಿಂದೆ ಸಾಗುತ್ತೇವೆ. ಲಾಲಕೃಷ್ಣ ಅದ್ವಾನಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ, ಬಿ.ಎಸ್.ಯಡಿಯೂರಪ್ಪ ಅವರಂತಹ ಮಹಾನ್ ನಾಯಕರು ಕಟ್ಟಿದಂತಹ ಪಕ್ಷ ಇದಾಗಿದೆ. ಜಗತ್ತೇ ಮೆಚ್ಚುವಂತ ನಾಯಕತ್ವ ಹೊಂದಿರುವ ನಮ್ಮೆಲ್ಲರ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎಂಟು ವರ್ಷದಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಮನೆ ಮನೆಗೆ ತಲುಪಿಸಿ ಮತದಾರರ ಮನವೊಲಿಸಬೇಕು ಎಂದರು.
ನಮ್ಮ ಎದುರಾಳಿ ಯಾವ ಪಕ್ಷದವರು, ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಬಗ್ಗೆ ಚಿಂತೆ ಮಾಡಬೇಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ಹೊತ್ತುಕೊಂಡು ಜ.21 ರಿಂದ ಜ.29 ರ ವರೆಗೆ ನಡೆಯುವ ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕರೆ ನೀಡಿದರು.
ನಂತರ ಮನೆ ಮನೆಗೆ ತೆರಳಿದ ಅವರು ವಿಜಯ ಸಂಕಲ್ಪ ಅಭಿಯಾನದ ಕರಪತ್ರಗಳನ್ನು ನೀಡಿ ನಾಡು ಕಟ್ಟುವ ಕಾರ್ಯದಲ್ಲಿ ಸಮರ್ಥ ನೇತ್ರತ್ವದ ಜೊತೆಯಾಗೋಣವೆಂದು ಬಿಜೆಪಿಯ ಭರವಸೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ವಿಜಯ ಸಂಕಲ್ಪ ಅಭಿಯಾನವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಕಳೆದ ಎರಡು ತಿಂಗಳಿಂದ ಪ್ರತಿ ಮತಗಟ್ಟೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ವಿಜಯ ಸಂಕಲ್ಪ ಅಭಿಯಾನವೆಂದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶವಾಗಿದೆ.
60 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಪಕ್ಷ ಮಾಡದ ಅಭಿವೃದ್ಧಿ ಕೆಲಸಗಳನ್ನು ಜಗತ್ತೆ ಮೆಚ್ಚಿಕೊಂಡಿರುವ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಎಂಟು ವರ್ಷಗಳಲ್ಲಿ ಮಾಡಿರುವ ಎ ಟು ಝಡ್ ಜನಪರ ಯೋಜನೆಗಳನ್ನು ಹಾಗೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಕಾರ್ಯಕ್ರಮಗಳ ಪಟ್ಟಿಯನ್ನು ಗಂಭೀರವಾಗಿ ತೆಗೆದುಕೊಂಡು ಮನೆ ಮನೆಗೆ ತಲುಪಿಸಿದರೆ ಸಾಕು ನಾವು ಚುನಾವಣೆ ಎಂಬ ಯುದ್ದದಲ್ಲಿ ಗೆದ್ದಂತೆ. ಯುದ್ದದಲ್ಲಿ ಕಾರ್ಯಕರ್ತರು ಸೈನಿಕರಾಗಿ ಕೆಲಸ ಮಾಡಬೇಕೆಂದು ಎಸ್.ವಿ.ಸಂಕನೂರ ಕರೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯರಾದ ಎ.ಬಿ.ಹಿರೇಮಠ, ಶಾಂತಾದೇವಿ ನಿಡವಣಿ, ಮುಖಂಡರಾದ ಸಿದ್ದನಗೌಡ ಪಾಟೀಲ, ಶಿವಾನಂದ ಗುಂಡಗೋವಿ, ರಾಯನಗೌಡ ಪಾಟೀಲ, ಎನ್.ಪಿ.ಕುಲಕರ್ಣಿ, ಪುರಸಭೆ ಸದಸ್ಯರಾದ ಮಹಾಂತೇಶ ಕಲಾಲ, ಜ್ಯೋತಿ ಗೊಲ್ಲರ, ರೇಣುಕಾ ಕಲಾಲ, ಸುಮಂಗಲಾ ಬೆಂಡಿಗೇರಿ, ಬಸವರಾಜ ಕಾತರಕಿ, ಬಸವರಾಜ ಕಟ್ಟಿಮನಿ, ಅಡಿವೆಪ್ಪ ಶಿರಸಂಗಿ, ಗೀತಾ ಜನ್ನರ, ಎಂ.ಬಿ.ತೋಟದ, ಈರಣ್ಣ ಚವಡಿ, ಮಹಾಲಕ್ಷ್ಮೀ ಮದಗುಣಕಿ, ಮಲ್ಲಿಕಾರ್ಜುನ ಸಂಗನಗೌಡರ, ಸಂತೋಷ ನಾವಳ್ಳಿ, ವಿನಾಯಕ ದಾಡಿಬಾವಿ ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.