ವಿಜಯಸಾಕ್ಷಿ ಸುದ್ದಿ, ನರಗುಂದ:
ಜಿಲ್ಲೆಯ ಗದಗ ತಾಲ್ಲೂಕಿನ ಹುಯಿಲಗೋಳ ಗ್ರಾಮದ ಯುವ ಮುಖಂಡ ಕಲ್ಮೇಶ ವಡ್ಡಿನ್, ಸದಸ್ಯರಾದ ಪ್ರಕಾಶ ಮೂಲಿಮನಿ, ಈರಣ್ಣ ಕಳಕಣ್ಣವರ ಅವರು ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಿದರು.
ಈ ವೇಳೆ ಯುವ ಮುಖಂಡ ಕಲ್ಮೇಶ ವಡ್ಡಿನ ಮಾತನಾಡಿ, ಜಿಲ್ಲೆಯಲ್ಲಿಯೇ ಚಿಕ್ಕನರಗುಂದ ಗ್ರಾ.ಪಂ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರನ್ನು ಅಭಿನಂದಿಸಿದರು. ಸದಸ್ಯರ, ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದ ಎಲ್ಲ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಆಸನದ ವ್ಯವಸ್ಥೆ, ವಿಶೇಷ ಚೇತನರಿಗೆ ಉದ್ಯಾನವನ, ಗ್ರಾಮಸಭಾ ಕಟ್ಟೆ ನಿರ್ಮಿಸಿದ್ದಕ್ಕೆ ಹರ್ಷಪಟ್ಟರು.
ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ‘ಚಿಕ್ಕನರಗುಂದ ಪಂಚಾಯತಿಯ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲು ಆಗಮಿಸಿದ ಹುಯಿಲಗೊಳ ಗ್ರಾ.ಪಂ. ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ನಿಮ್ಮ ಭೇಟಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಉತ್ಸಾಹ ತುಂಬಿದಂತಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪುಗೌಡ ಹಿರೇಗೌಡ್ರ, ಹಿರಿಯರಾದ ಅಡಿವೆಪ್ಪ ಮರಿಯಣ್ಣವರ ಉಪಸ್ಥಿತರಿದ್ದರು.