ಇಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಕಳೆದ ಮೂರು ವರ್ಷಗಳಿಂದ ಗದಗ-ಬೆಟಗೇರಿ ನಗರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದೇ ಅವಳಿ ನಗರದ ಅಭಿವೃದ್ಧಿ ಕುಂಠಿತವಾಗಿತ್ತು. ಇದೀಗ ಜನಪ್ರತಿನಿಧಿಗಳೂ ಆಯ್ಕೆಯಾಗಿ ಒಂದು ತಿಂಗಳ ಬಳಿಕ ನಗರಸಭೆ ಸಿಂಹಾಸ‌ನಕ್ಕಾಗಿ ಅಧ್ಯಕ್ಷ-ಉಪಾಧ್ಯಕ್ಷರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದೆ.

ಗದಗ-ಬೆಟಗೇರಿ ಅವಳಿ‌ ನಗರದ ಜನರ ಕುತೂಹಲ ಕೆರಳಿಸಿರುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ.

ನಗರಸಭೆ ಕಾರ್ಯಾಲಯದಲ್ಲಿ ಮಧ್ಯಾಹ್ನ 2 ಗಂಟೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಲು ಇಚ್ಛಿಸುವವರು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯೊಳಗಾಗಿ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ಅಭ್ಯರ್ಥಿಗಳು ಅಥವಾ ಸೂಚಕರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು.

ಇಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಚುನಾವಣಾ ಸಭೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯಲಿದೆ. ಬಳಿಕ ನಾಮಪತ್ರ ಹಿಂಪಡೆಯುವ ತಿಳುವಳಿಕೆ ಪತ್ರವನ್ನು ಅಭ್ಯರ್ಥಿಗಳು ಅಥವಾ ಅವರಿಂದ ಅಧಿಕಾರ ಹೊಂದಿದ ಸೂಚಕರು ಲಿಖಿತ ರೂಪದಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಸಭೆಯಲ್ಲಿ ಮತದಾನದ ಅಗತ್ಯವಿದ್ದಲ್ಲಿ ಹಾಜರಿದ್ದ ಸದಸ್ಯರು ಸಭೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಬಹುದು. ನಿಯಮ 4ರ ಪ್ರಕಾರ ಒಬ್ಬ ಸದಸ್ಯ ಓರ್ವ ಅಭ್ಯರ್ಥಿಯನ್ನು ಮಾತ್ರ ಸೂಚಿಸಬೇಕು. ಇನ್ನು ಸಭೆ ನಡೆಯುವ 15 ನಿಮಿಷ ಮುಂಚಿತವಾಗಿಯೇ ಸದಸ್ಯರು ಸಭೆಗೆ ಹಾಜರಾಗಬೇಕು ಎಂದು ಗದಗ-ಬೆಟಗೇರಿ‌ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ತಿಳಿಸಿದ್ದಾರೆ.

ನಗರಸಭೆಯಲ್ಲಿ ಬಿಜೆಪಿ ಓರ್ವ ಸಂಸದರನ್ನೊಳಗೊಂಡಂತೆ 19 ಸಂಖ್ಯಾಬಲ ಹೊಂದಿದೆ. ಅದರಂತೆ ಕಳೆದ ಬಾರಿ ನಗರಸಭೆ ಪಟ್ಟಕ್ಕೇರಿದ್ದ ಕಾಂಗ್ರೆಸ್ ಇಬ್ಬರು ಸ್ವತಂತ್ರ ಸದಸ್ಯರ ಬೆಂಬಲ ಹಾಗೂ ಓರ್ವ ಶಾಸಕರನ್ನೊಳಗೊಂಡಂತೆ 18 ಸಂಖ್ಯಾಬಲ ಹೊಂದಿದೆ. ಹೀಗಾಗಿ ನಗರಸಭೆ ಗದ್ದುಗೆಗಾಗಿ ಕಾಂಗ್ರೆಸ್ ಹಾಗೂ ಕಮಲ ಮಧ್ಯೆ ಜಿದ್ದಾಜಿದ್ದಿ‌ ನಡೆದಿದೆ. ಬಿಜೆಪಿಗೆ ಬಹುಮತವಿದ್ದರೂ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡಲೊಪ್ಪದ‌ ಕೈ ನಾಯಕರು ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ. ಇದಕ್ಕಾಗಿ ಹಲವು ರೀತಿಯ ‌ಕಸರತ್ತು‌ ನಡೆಸಿದ್ದಾರೆ. ಇದು ಬಿಜೆಪಿಗೆ ಬಿಸಿತುಪ್ಪವಾಗಿ ಮಾರ್ಪಟ್ಟಿದೆ. ಸುಲಭವಾಗಿ ಸಿಕ್ಕ ಅಧಿಕಾರ ಎಲ್ಲಿ ಕೈ ತಪ್ಪಿ ಹೋಗುವುದೋ ಎಂಬ ಭೀತಿ ಎದುರಾಗಿದ್ದು, ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಪ್ರವಾಸ ಕೂಡ ಹಮ್ಮಿಕೊಂಡಿತ್ತು. ಆದರೆ, ಇಂದು ನಡೆಯುವ ಚುನಾವಣೆಯಲ್ಲಿ ಏನಾಗುತ್ತೋ ಎಂಬುವುದನ್ನು ಕಾದು ನೋಡಬೇಕಿದೆ.


Spread the love

LEAVE A REPLY

Please enter your comment!
Please enter your name here