ವಿಜಯಸಾಕ್ಷಿ ಸುದ್ದಿ, ಗದಗ:
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಎರಡಂಕಿ ತಲುಪಿರುವ ಕೊರೊನಾ ಸೋಂಕು ಶತಕದತ್ತ ಮುನ್ನುಗ್ಗುತ್ತಿದೆ. ಶನಿವಾರ ಒಂದೇ ದಿನ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿತ್ತು.
ಭಾನುವಾರವೂ ಜಿಮ್ಸ್ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಸತಿ ನಿಲಯದಲ್ಲಿ ಐಸೋಲೇಶನ್ ಮಾಡಲಾಗಿದೆ.
ಅದರಂತೆ, ಅವಳಿ ನಗರದ ಎಸ್.ಎಂ.ಕೃಷ್ಣ ನಗರದ ಬಡಾವಣೆ ಪ್ರಾಥಮಿಕ ಶಾಲೆ ನಂ.12ರಲ್ಲಿ ಇಬ್ಬರು ಶಿಕ್ಷಕರಿಯರು ಹಾಗೂ ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ವಿದ್ಯಾರ್ಥಿಗಳಲ್ಲೂ ಸೋಂಕಿನ ಭೀತಿ ಕಾಡುತ್ತಿದೆ.
ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಎಸ್.ಎಂ.ಕೃಷ್ಣ ಶಾಲೆಯ ಮೂವರು ಸೇರಿ ಭಾನುವಾರ ಜಿಲ್ಲೆಯಲ್ಲಿ ಏಳು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಗದಗ ತಾಲೂಕಿನ ನಾಲ್ವರು, ಮುಂಡರಗಿ ವ್ಯಾಪ್ತಿಯ ಮೂವರಿಗೆ ಸೋಂಕು ಖಚಿತಪಟ್ಟಿದೆ.
ಭಾನುವಾರದವರೆಗೆ (ಜ.9) ಜಿಲ್ಲೆಯಲ್ಲಿ 6,44,329
ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ 6,94,360 ಮಾದರಿ ಸಂಗ್ರಹಿಸಿದ್ದು, 6,68,235
ನಕಾರಾತ್ಮಕವಾಗಿವೆ. ಭಾನುವಾರದ 07 ಪ್ರಕರಣ ಸೇರಿ ಒಟ್ಟು 26,127 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಈವರೆಗೆ 319 ಜನ ಮೃತಪಟ್ಟಿದ್ದು, ಒಟ್ಟು 25,755 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 53 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.