ಮೂರಾರ್ಜಿ ವಸತಿ ಶಾಲೆ, ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ ಕೊರೊನಾ ಮಹಾಸ್ಫೋಟ: 80 ಮಕ್ಕಳು ಸೇರಿ 289 ಜನರಿಗೆ ಕೋವಿಡ್ ಸೋಂಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಕಳೆದ ಒಂದು ವಾರದಿಂದ ನೂರರ ಗಡಿ ದಾಟಿದ್ದ ಕೊರೊನಾ ಸೋಂಕು ಮುನ್ನೂರರ ಗಡಿಯತ್ತ ದಾಪುಗಾಲು ಇಡುತ್ತಿದೆ. ಗುರುವಾರ ಒಂದೇ ದಿನ 80 ಮಕ್ಕಳು ಸೇರಿದಂತೆ 289 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 955ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆಯೂ ವರದಿಯಾಗುತ್ತಿದೆ.

ಜಿಮ್ಸ್‌ನ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಗೆ, ಬೆಟಗೇರಿಯ ಶರಣ ಬಸವೇಶ್ವರ ಪ್ರೌಢಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಗದಗ ತಾಲ್ಲೂಕು ಮಲ್ಲಸಮುದ್ರ ಗ್ರಾಮದ ಮೂರಾರ್ಜಿ ವಸತಿ ಶಾಲೆಯ 40ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಅದರಂತೆ, ಗದಗ ತಾಲ್ಲೂಕಿನ ಹುಲಕೋಟಿಯ ಶ್ರೀರಾಜೇಶ್ವರಿ ವಿದ್ಯಾನಿಕೇತನದ ಮೂವರು ವಿದ್ಯಾರ್ಥಿಗಳಲ್ಲಿ, ಚಿಂಚಲಿ ಗ್ರಾಮದ ತೇರಿನಗಡ್ಡಿ ಹತ್ತಿರದ ಓರ್ವ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಗುರುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,12,493 ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 6,85,246 ನಕಾರಾತ್ಮಕವಾಗಿವೆ. ಗುರುವಾರದ 289 ಪ್ರಕರಣ ಸೇರಿ ಒಟ್ಟು 27,247 ಜನರಿಗೆ ಸೋಂಕು ದೃಢಪಟ್ಟಿದೆ. ಇಂದಿನ ಒಂದು ಸೇರಿ ಇದುವರೆಗೂ ಸೋಂಕಿನಿಂದ 321 ಜನ ಮೃತಪಟ್ಟಿದ್ದಾರೆ. ಇಂದಿನ 73 ಜನ ಸೇರಿ ಒಟ್ಟು 25,971 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 955 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿರುವ 955 ಸಕ್ರಿಯ ಪ್ರಕರಣಗಳ ಪೈಕಿ ಗದಗ 697, ಮುಂಡರಗಿ 101, ನರಗುಂದ 10, ರೋಣ 94, ಶಿರಹಟ್ಟಿ ತಾಲ್ಲೂಕಿನಲ್ಲಿ 50 ಹಾಗೂ ಹೊರ ಜಿಲ್ಲೆ ಅಥವಾ ರಾಜ್ಯದ 3 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here