ನಗರಸಭೆ ಗದ್ದುಗೆ ಯಾರ ಮುಡಿಗೆ? ಗೆಲುವಿನ ಲೆಕ್ಕಾಚಾರದಲ್ಲಿ ಕೈ-ಕಮಲ ನಾಯಕರು; ಖಾಸಗಿ ಸಂಸ್ಥೆ ಸಮೀಕ್ಷೆ ಏನ್ ಹೇಳುತ್ತೆ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ-ಬೆಟಗೇರಿ ನಗರಸಭೆಗೆ ಸೋಮವಾರ ಮತದಾನ ನಡೆದಿದ್ದು, ಅವಳಿ ನಗರದ 35 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ 146 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸುಭದ್ರಗೊಂಡಿದೆ. ಡಿ.30ರಂದು ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದ್ದು, ಈ ಬಾರಿ ಗದುಗಿನ ಗದ್ದುಗೆ ಯಾರ ಪಾಲಾಗಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.

ನಗರಸಭೆ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮದೇ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ನಗರಸಭೆ ಸಿಂಹಾಸನಕ್ಕಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಪಹಪಿಸುತ್ತಿದ್ದಾರೆ. ಈ ಬೆನ್ನಲ್ಲೇ ಯಾರು ಗೆಲ್ಲಲಿದ್ದಾರೆ ಎಂಬ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಳಿ ನಗರದ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ, ಅಭ್ಯರ್ಥಿಗಳಲ್ಲಿ ಗೊಂದಲದ ಜೊತೆಗೆ ಆತಂಕ ಸೃಷ್ಟಿಸಿದೆ.

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಅತ್ಯಧಿಕ ಮತ ಪಡೆದಿರುವ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದ್ದು, ಖಾಸಗಿ ಏಜೆನ್ಸಿ ಒಂದು ನಡೆಸಿದೇ ಎನ್ನಲಾದ ಸಮೀಕ್ಷೆಯಲ್ಲೂ ಕಮಲ ಕಲಿಗಳು ಮೇಲುಗೈ ಸಾಧಿಸಿದ್ದಾರೆ. ಈ ಸಮೀಕ್ಷೆಯ ಪ್ರಕಾರ ನಗರಸಭೆ ಗದ್ದುಗೆ ಬಿಜೆಪಿ ಪಾಲಾಗಲಿದೆ ಎನ್ನಲಾಗಿದೆ. ಈ ಸಮೀಕ್ಷೆಯ ಪ್ರಕಾರ ಕಮಲ 18-20 ವಾರ್ಡ್‌ಗಳಲ್ಲಿ ಅರಳಲಿದೆ ಎಂದು ಹೇಳಲಾಗುತ್ತಿದೆ.

ಇತ್ತ, ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸುದೀರ್ಘ ಅಧಿಕಾರ ಅನುಭವಿಸಿರುವ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, 10-13 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂಬುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಅದರಂತೆ, ಕೆಲ ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಭರ್ಜರಿ ಸವಾಲೊಡ್ಡಿ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ 2-3 ವಾರ್ಡ್‌ಗಳಲ್ಲಿ ಗೆಲ್ಲಲಿದ್ದಾರೆ ಎಂಬುವುದು ಖಾಸಗಿ ಏಜೆನ್ಸಿ ನಡೆಸಿದ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.

ಬೆಟ್ಟಿಂಗ್ ಜೋರು!

ಗದಗ-ಬೆಟಗೇರಿ ನಗರಸಭೆಯ ಮತದಾನ ಅಂತ್ಯಗೊಳ್ಳುತ್ತಲೇ ಅವಳಿ ನಗರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ಕೇಳಿ ಬರುತ್ತಿದೆ. ಅವಳಿ ನಗರದ ವಾರ್ಡ್ ನಂ.2,8,9,10,12,16,17,19,22,28,34 ಹಾಗೂ 35ನೇ ವಾರ್ಡ್‌ಗಳಲ್ಲಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಯಾರು ಗೆಲ್ಲಬಹುದೆಂಬ ಕುತೂಹಲ ಹೆಚ್ಚಿಸಿದೆ. ಹೀಗಾಗಿ ಅವಳಿ ನಗರದ ಜನತೆ ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್‌ಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ.

ಗೆಲ್ಲುವ ಪಕ್ಷಕ್ಕೆ ಮಾರಕ?

ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ತಮ್ಮ ಶಕ್ತಿ ಪ್ರದರ್ಶಿಸಲು ನಗರಸಭೆ ಚುನಾವಣೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಹೀಗಾಗಿ ಮತದಾರರನ್ನು ಸೆಳೆಯಲು ಉಭಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮತದಾನ ಆಗಿದ್ದು, ಗೆಲ್ಲುವ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇನ್ನು ಕಡಿಮೆ ಮತದಾನಕ್ಕೆ ಕ್ಷೇತ್ರ ವಿಂಗಡಣೆಯೇ ಕಾರಣ ಎನ್ನಲಾಗುತ್ತಿದೆ. ವಾರ್ಡ್‌ಗಳ ವಿಂಗಡಣೆಯಿಂದಾಗಿ ಬಹುತೇಕ ಮತದಾರರರಿಗೆ ಮತ ಎಲ್ಲಿಗೆ, ಯಾವ ಮತಗಟ್ಟೆಗೆ ಹೋಗಿ ಹಾಕಬೇಕೆಂಬ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಸರಿಯಾದ ಸಮಯಕ್ಕೆ ಮತದಾನ ಮಾಡಲಾಗದೇ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಹೊಟ್ಟೆಪಾಡಿಗಾಗಿ ಬಹುತೇಕ ಜನ ಅವಳಿ ನಗರದಿಂದ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗಿದ್ದು, ಇದು ಕೂಡಾ ಕಡಿಮೆ ಮತದಾನ ಆಗಲು ಕಾರಣ ಎಂದು ಬಣ್ಣಿಸಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here