ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹದಿಹರಿಯದವರಿಂದ ಹಿಡಿದು ವಯೋಮಾನದ ಮಕ್ಕಳಿಗೂ ಕೊರೊನಾ ಸೋಂಕು ಕಂಟಕವಾಗಿ ಕಾಡುತ್ತಿದೆ. ಕೋವಿಡ್ ಬಗೆಗಿನ ನಿರ್ಲಕ್ಷ್ಯದಿಂದಾಗಿ ಎಂಟು ದಿನಗಳಲ್ಲಿ ಬರೋಬ್ಬರಿ 182 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.
ಗದಗನ ಆದರ್ಶ ನಗರದ ಆಂಜನೇಯ ದೇವಸ್ಥಾನದ ಹತ್ತಿರದ ಒಂದೇ ಕುಟುಂಬದ ಎಂಟು ಜನಕ್ಕೆ ಕೋವಿಡ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಕಂಟೈನ್ಮೆಂಟ್ ಝೋನ್ ಮಾಡಿದೆ.
ರೋಣ ಪಟ್ಟಣದ ತಾಲ್ಲೂಕು ಆಸ್ಪತ್ರೆ ಇಲಾಖೆಯ ಕಚೇರಿಯ ಇಬ್ಬರು ಹಾಗೂ ಸವಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಓರ್ವ ವೈದ್ಯಾಧಿಕಾರಿಗೆ ಸೋಂಕು ದೃಢಪಟ್ಟಿದೆ.
ಅದರಂತೆ, ಮುಂಬೈನಿಂದ ಗದಗ ನಗರಕ್ಕೆ ಬಂದಿರುವ ಮುಳಗುಂದ ನಾಕಾ ಹತ್ತಿರದ ಜೈನ್ ಕಾಲನಿಯ ಓರ್ವ ನಿವಾಸಿ ಹಾಗೂ ತೋಂಟದಾರ್ಯ ಮಠದ ರಸ್ತೆಯ ವಿಮಲ್ ಕಟ್ಟಡ ಹತ್ತಿರದ ಮೂವರು ನಿವಾಸಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಗುರುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,00,373 ಮಾದರಿ ಸಂಗ್ರಹಿಸಿದ್ದು, 6,74,097 ನಕಾರಾತ್ಮಕವಾಗಿವೆ. ಗುರುವಾರದ 69 ಪ್ರಕರಣ ಸೇರಿ ಒಟ್ಟು 26,276 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 8 ಸೇರಿ ಒಟ್ಟು 25,775 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 182 ಸಕ್ರಿಯ ಪ್ರಕರಣಗಳಿವೆ.
ಒಟ್ಟು 182 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 128, ಮುಂಡರಗಿ 25, ನರಗುಂದ 02, ರೋಣ 13 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 14 ಪ್ರಕರಣಗಳಿವೆ.
ಅದರಂತೆ, ಇಲ್ಲಿಯವರೆಗಿನ ಒಟ್ಟು 319 ಸಾವುಗಳ ಪೈಕಿ ಗದಗ ತಾಲ್ಲೂಕಿನಲ್ಲಿ 167, ಮುಂಡರಗಿ 22, ನರಗುಂದ 14, ರೋಣ 48 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 43 ಹಾಗೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯದ ಒಟ್ಟು 25 ಜನ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.