ವಿಜಯಸಾಕ್ಷಿ ಸುದ್ದಿ, ಗದಗ:
ಕಳೆದೊಂದು ವಾರದಿಂದ ಶಾಲಾ ಕಾಲೇಜು ಮಕ್ಕಳಲ್ಲೂ ಹೆಚ್ಚೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಕೋವಿಡ್ ಕಂಟಕವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿತ್ತು. ಜ.14ರಂದು ಕಾಣಿಸಿಕೊಂಡ 110 ಸೋಂಕಿತರ ಪೈಕಿ 18 ವರ್ಷದೊಳಗಿನ 21 ಜನ ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ ಈ ವಯೋಮಾನದ 41 ಸಕ್ರಿಯ ಪ್ರಕರಣಗಳಿವೆ.
30 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು

ಜಿಲ್ಲೆಯ ರೋಣದ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಕೊರೊನಾ ಸ್ಫೋಟಗೊಂಡಿದೆ. ಒಂದೇ ದಿನ ರಾಜೀವ್ ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜಿನ ಮೂವರು ವೈದ್ಯ ಉಪನ್ಯಾಸಕರು, 30 ವಿದ್ಯಾರ್ಥಿಗಳು ಸೇರಿ 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜ.13ರಂದು ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿ 267 ಜನರ ಮಾದರಿ ಸಂಗ್ರಹಿಸಿತ್ತು. ರಾಜೀವ್‌ಗಾಂಧಿ ಆಯುರ್ವೇದಿಕ ಆಸ್ಪತ್ರೆಯಲ್ಲಿ 27ಜನ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 6 ಜನರನ್ನು ಹೋಂ ಐಸೋಲೇಶ್‌ನಲ್ಲಿರಸಲಾಗಿದ್ದು, ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಡಿಎಚ್‌ಒ ಡಾ.ಜಗದೀಶ್ ನುಚ್ಚಿನ್ ತಿಳಿಸಿದ್ದಾರೆ.
ಶನಿವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,04,116 ಮಾದರಿ ಸಂಗ್ರಹಿಸಿದ್ದು, 6,77,596 ನಕಾರಾತ್ಮಕವಾಗಿವೆ. ಶನಿವಾರದ 134 ಪ್ರಕರಣ ಸೇರಿ ಒಟ್ಟು 26,520 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 14 ಸೇರಿ ಒಟ್ಟು 25,798 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 403 ಸಕ್ರಿಯ ಪ್ರಕರಣಗಳಿವೆ.
ಒಟ್ಟು 403 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 262, ಮುಂಡರಗಿ 46, ನರಗುಂದ 4, ರೋಣ 53 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 37 ಹಾಗೂ ಹೊರ ಜಿಲ್ಲೆಯ 1ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.