ವಿಜಯಸಾಕ್ಷಿ ಸುದ್ದಿ, ಗದಗ
ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವಾಗ ಸ್ವಂತ ಲಾಭಕ್ಕಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನ.೧೩ರಂದು ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ಮಧ್ಯೆ ಟಿ-೨೦ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿ ನಡೆಯುತ್ತಿರುವಾಗ ಮದ್ಯಾಹ್ನ ೩.೪೫ರ ಹೊತ್ತಿಗೆ ಶಹರದ ಎಸ್.ಎಂ.ಕೃಷ್ಣ ನಗರದ ಆಟೋ ಸ್ಟ್ಯಾಂಡ್ ಬಳಿ ಆರೋಪಿತರಾದ ಕುಷ್ಠಗಿ ಚಾಳದ ಈರಪ್ಪ ಬೂದಪ್ಪ ಹನಮನಹಳ್ಳಿ ಹಾಗೂ ರವಿ ಯಮನಪ್ಪ ವಡ್ಡರಕಲ್ಲ ಎಂಬಿಬ್ಬರು ಪಂದ್ಯಾವಳಿಯ ಮೇಲೆ ಬೆಟ್ಟಿಂಗ್ ನಡೆಸಿ, ಒಂದಕ್ಕೆ ಮೂರು ಪಟ್ಟು ಹಣ ಕೊಡುವದಾಗಿ ಹೇಳಿ ಹಣ ಕಟ್ಟಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿತರಿಂದ ನಗದು ಹಣ 3500 ರೂ, ಜೂಜಾಟಕ್ಕೆ ಬಳಸಿದ್ದ ತಂಡದ ಹೆಸರು ಬರೆದಿದ್ದ ಚೀಟಿ, ಪೆನ್, ೫ ಸಾವಿರ ರೂ. ಬೆಲೆಬಾಳುವ ಒಟ್ಟೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗದಗ ಗ್ರಾಮೀಣ ಠಾಣೆಯ ಪಿಐ ಚಂದ್ರಶೇಖರ ಹರಿಹರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.