ವಿಜಯಸಾಕ್ಷಿ ಸುದ್ದಿ, ನವದೆಹಲಿ
ವೀರೇಂದ್ರ ಸೆಹ್ವಾಗ್ ಭಾರತ ಕಂಡ ಶ್ರೇಷ್ಠ ಆಟಗಾರ. ವೀರೂ ಮೈದಾನದಲ್ಲಿ ಇದ್ದರೆ ಸಾಕು, ಬೌಲರ್ ಗಳು ಬೆವರುತ್ತಿದ್ದರು. ಭಾರತದ ಸ್ಕೋರ್ ಬೋರ್ಡ್ ನಲ್ಲಿ ರನ್ ಗಳು ವೇಗವಾಗಿ ಹೆಚ್ಚಾಗುತ್ತಿದ್ದವು. ಇಂತಹ ಸೆಹ್ವಾಗ್ ಅದೊಮ್ಮೆ ಕೇವಲ ಎರಡೇ ಎರಡು ಎಸೆತಗಳಲ್ಲಿ 21 ರನ್ ಗಳನ್ನು ಬಾರಿಸಿದ್ದರು. ಕೇವಲ ಎರಡೇ ಬೌಲ್ ನಲ್ಲಿ 21 ರನ್ ಕದಿಯುವುದು ಹೇಗೆ? ಅನಿಸುತ್ತಿದೆಯೇ ಹಾಗಾದರೆ ಈ ಸ್ಟೋರಿ ಓದಿ.
ಪಾಕ್ ನ ಬೌಲರ್ ರಾಣಾ ನವೇದ್ ಉಲ್ ಹಸನ್ ಅವರ ಬೌಲ್ ನಲ್ಲಿಯೇ ವೀರೂ ಈ ಚಮತ್ಕಾರ ಮಾಡಿದ್ದಾರೆ. ಭಾರತದ ಬದ್ಧ ವೈರಿ ಪಾಕ್ ವಿರುದ್ಧ 2004ರಲ್ಲಿ ಪಂದ್ಯ ನಡೆದ ಸಂದರ್ಭದಲ್ಲಿಯೇ ವೀರೂ ಇಂತಹ ವೀರಾವೇಶ ತೋರ್ಪಡಿಸಿದ್ದಾರೆ.
ವೇಗಿ ರಾಣಾ ಮಾಡಿದ ತಪ್ಪು ಏನೆಂದರೆ, ಎರಡೇ ಬೌಲ್ ಎಸೆದು, ಇತರೆ ಲೆಕ್ಕಾಚಾರದಲ್ಲಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ದಾಖಲೆಯ 21ರನ್ ಕದಿಯಲು ಅವಕಾಶ ನೀಡಿದ್ದಾರೆ. ಆ ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ವೇಗಿ ರಾಣಾ ಬೌಲಿಂಗ್ ಮಾಡುತ್ತಿದ್ದರು. ಮೊದಲ ಬೌಲ್ ನೋಬಾಲ್ ಆಗಿತ್ತು. ಈ ಬೌಲ್ ನ್ನು ಸೆಹ್ವಾಗ್ ಬೌಂಡರಿಗೆ ಅಟ್ಟಿದ್ದರು. ಎರಡನೇ ಬೌಲ್ ನ್ನೂ ರಾಣಾ ಮತ್ತೆ ನೋ ಬಾಲ್ ಎಸೆದಿದ್ದರು. ಅದನ್ನು ಕೂಡ ಸೆಹ್ವಾಗ್ ಬೌಂಡರಿಗೆ ನೂಕಿದ್ದರು. ಮೂರನೆಯ ಎಸೆತ ಕೂಡ ಹ್ಯಾಟ್ರಿಕ್ ನೋ ಬೌಲ್ ಗೆ ಸಾಕ್ಷಿಯಾಯಿತು. ಆದರೆ, ಮೂರನೇ ಬೌಲ್ ನಲ್ಲಿ ಸೆಹ್ವಾಗ್ ರನ್ ಕದಿಯಲಿಲ್ಲ. ಆ ನಂತರ ಸರಿಯಾದ ಬೌಲ್ ನ್ನು ಎಸೆದರು. ಆಗಲೂ ಸೆಹ್ವಾಗ್ ರನ್ ಕದಿಯುವ ಪ್ರಯತ್ನ ಮಾಡಲಿಲ್ಲ. ಆ ನಂತರ ಬೌಲ್ ನ್ನು ಮತ್ತೆ ರಾಣಾ ನೋ ಬೌಲ್ ಎಸೆದರು. ಆಗ ಬಿಡ್ತಾರಾ ಸೆಹ್ವಾಗ್? ಮತ್ತೆ ಬೌಂಡರಿ ಬಾರಿಸಿದರು.
ಹೀಗೆ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದರೆ, ಬೌಲರ್ ಕಂಗಾಲಾಗಿ ನಂತರದ ಬೌಲ್ ನ್ನು ನೋ ಬೌಲ್ ಹಾಕಿದರು. ಮತ್ತೊಂದು ಬೌಂಡರಿ ವೀರು ಬ್ಯಾಟಿಂಗ್ ನಿಂದ ಮೂಡಿ ಬಂತು.
ಆಗ ಬೌಲರ್ ನಿನ್ನ ಸಹವಾಸವೇ ಸಾಕಪ್ಪ ಎನ್ನುವಂತೆ ಕೈ ಮುಗಿದರು. ಹೀಗಾಗಿ ಒಟ್ಟು 2 ಸರಿಯಾದ ಬೌಲ್ ಹಾಗೂ 5 ನೋ ಬೌಲ್ ಲೆಕ್ಕಾಚಾರದಲ್ಲಿ, ನಾಲ್ಕು ಬೌಂಡರಿ ಅಂದ್ರೆ 16ರನ್ ಹಾಗೂ 5 ನೋ ಬೌಲ್ ನಿಂದ ಒಟ್ಟು 21ರನ್ ಗಳನ್ನು ವೀರು ಗಳಿಸಿದ್ದರು. ಈ ವಿಡಿಯೋವನ್ನು ಈಗಲೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತ ಮೆಲುಕು ಹಾಕುತ್ತಿದ್ದಾರೆ.