ವಿಜಯಸಾಕ್ಷಿ ಸುದ್ದಿ, ಗದಗ:
ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಮೊಸಳೆ ಕಚ್ಚಿ ಮೃಗಾಲಯದ ಪ್ರಾಣಿಪಾಲಕ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಗದಗ ತಾಲೂಕಿನ ಬಿಂಕದಕಟ್ಟಿ ಮೂಲದ ಮೃತ್ಯುಂಜಯ ಬಸಯ್ಯ ಹಿರೇಮಠ ಎಂಬ ಪ್ರಾಣಿಪಾಲಕ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂದಿನಂತೆ ಶನಿವಾರ ಮೊಸಳೆ ಮನೆ ಸ್ವಚ್ಚಗೊಳಿಸಲು ಹೋದಾಗ ದೊಡ್ಡ ಮೊಸಳೆ ಪ್ರಾಣಿಪಾಲಕ ಮೃತ್ಯುಂಜಯ ಅವರ ಮೇಲೆ ದಾಳಿ ನಡೆಸಿ ತಲೆಗೆ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಅಲ್ಲಿಯೇ ಇದ್ದ ಇನ್ನಿತರ ಸಿಬ್ಬಂದಿಗಳು ಕಟ್ಟಿಗೆಯಿಂದ ಮೊಸಳೆಗೆ ಹೊಡೆದು ಬಿಡಿಸಿದ್ದಾರೆ. ಬಡ ಕುಟುಂಬದ ಮೃತ್ಯುಂಜಯ ಅವರು ಬಿಂಕದಕಟ್ಟಿ ಮೃಗಾಯಲದಲ್ಲಿ ಕಳೆದ 20 ವರ್ಷಗಳಿಂದ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ ಎಫ್ ಒ ಚೈತ್ರಾ ಮೆಣಸಿನಕಾಯಿ, ‘ಗದಗ ಮೃಗಾಲಯದಲ್ಲಿ ಪ್ರಾಣಿ ಪಾಲಕ ಮೃತ್ಯುಂಜಯ ಅವರು ಮೊಸಳೆ ಮನೆ ಸ್ವಚ್ಛಗೊಳಿಸಲು ಹೋದಾಗ ಮೊಸಳೆ ದಾಳಿ ಮಾಡಿದ್ದು, ತಕ್ಷಣ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 20 ವರ್ಷದಿಂದ ಮೃತ್ಯುಂಜಯ ಅವರೇ ಮೊಸಳೆ ಮನೆ ಸ್ವಚ್ಚಗೊಳಿಸುವುದು, ಮೊಸಳೆಗೆ ಆಹಾರ ನೀಡುವುದನ್ನು ಮಾಡುತ್ತಿದ್ದರು. ಯಾವತ್ತೂ ಹೀಗೆ ಆಗಿರಲಿಲ್ಲ. ಆದರೆ, ದುರದೃಷ್ಟವಶಾತ್ ಶನಿವಾರ ಈ ಘಟನೆ ನಡೆದಿದೆ’ ಎಂದರು.
‘ಮೃಗಾಲಯದಲ್ಲಿರುವ ಮೊಸಳೆ ಮನೆಯಲ್ಲಿ ಎರಡು ಭಾಗ ಮಾಡಲಾಗಿದೆ. ಒಂದು ಭಾಗಕ್ಕೆ ಮೊಸಳೆಯನ್ನು ಸ್ಥಳಾಂತರಿಸಿದ ಮೇಲೆಯೇ ಆ ಮನೆಯನ್ನು ಸ್ಪಚ್ಚಗೊಳಿಸಲಾಗುತ್ತದೆ. ಆದರೆ, ಮೃಗಾಲಯದಲ್ಲಿ ಇವತ್ತು ಬಹಳ ಗದ್ದಲ ಇದ್ದಿದ್ದರಿಂದ ಅವರೊಬ್ಬರೆ ಸ್ವಚ್ಛಗೊಳಿಸಲು ಹೋಗಿದ್ದರು. ಈ ವೇಳೆ ದೊಡ್ಡ ಮೊಸಳೆ ದಾಳಿ ಮಾಡಿದೆ. ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವುದರಿಂದ ಜಾಗೃತಿ ವಹಿಸದೆ ನಿಷ್ಕಾಳಜಿ ತೋರಿರಬಹುದು. ಆದರೆ, ಈ ಘಟನೆ ಹೇಗಾಯಿತು ಎಂಬುವುದರ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಕಳೆದ ಇಪ್ಪತ್ತು ವರ್ಷಗಳಿಂದ ಮೃತ್ಯುಂಜಯ ಅವರೇ ಮೊಸಳೆ ಮನೆ ಸ್ವಚ್ಚಗೊಳಿಸುತ್ತಾ ಬಂದಿದ್ದಾರೆ. ಶನಿವಾರ ಸ್ವಚ್ಛಗೊಳಿಸಲು ಹೋದಾಗ ಮನೆಯಲ್ಲಿದ್ದ ಹುಲ್ಲಿನ ಮೇಲಿದ್ದ ಮೊಸಳೆ ದಾಳಿ ನಡೆಸಿ ಗಾಯಗೊಳಿಸಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸದ್ಯ ಆರೋಗ್ಯವಾಗಿದ್ದಾರೆ’ ಎಸಿಎಫ್ ಪರಿಮಳ ತಿಳಿಸಿದರು.