ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ವಿಜಯಸಾಕ್ಷಿ ಸುದ್ದಿ, ಮುಂಡರಗಿ:
ನೀರು ಕುಡಿಯಲು ಹೋಗಿದ್ದರು ಎನ್ನಲಾದ ಮೂವರು ಬಾಲಕಿಯರು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಅಸುನೀಗಿರುವ ದುರ್ಘಟನೆ ಮುಂಡರಗಿ ತಾಲ್ಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. ಬಸವರಾಜ ನೂರಪ್ಪ ಲಮಾಣಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.
ಅತ್ತಿಕಟ್ಟಿ ತಾಂಡಾದ ಒಂದೇ ಕುಟುಂಬದ ಸುನೀತಾ(೧೩), ಅಂಕಿತಾ(೧೦) ಹಾಗೂ ಡೋಣಿ ತಾಂಡಾದ ಸುನೀತಾ ಲೋಕೇಶ್ ಲಮಾಣಿ(೧೦) ಮೃತ ದುರ್ದೈವಿಗಳಾಗಿದ್ದಾರೆ.
ಈ ಮೂವರು ಮೃತ ಬಾಲಕಿಯರು ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ್ದರು. ಈ ವೇಳೆ ಬಿಸಿಲಿನ ಬೇಗೆಗೆ ನೀರಿನ ದಾಹ ನೀಗಿಸಿಕೊಳ್ಳಲು ಕೃಷಿ ಹೊಂಡದಲ್ಲಿ ನೀರು ಕುಡಿಯಲು ತೆರಳಿದ್ದಾಗ ಕಾಲು ಜಾರಿ ಬಿದ್ದು ಬಾಲಕಿಯರು ಅಸುನೀಗಿರಬಹುದು ಎಂದು ಶಂಕಿಸಲಾಗಿದೆ.
ತಂದೆ-ತಾಯಿ ಜೊತೆ ಗೋವಾದಲ್ಲಿ ವಾಸವಿರುವ ಅತ್ತಿಕಟ್ಟಿ ತಾಂಡಾದ ಸುನೀತಾ ಹಾಗೂ ಅಂಕಿತಾ ಚಿಕ್ಕಪ್ಪನ ಮದುವೆಗೆ ಬಂದಿದ್ದರು. ಸೋಮವಾರ ನೀರು ಕುಡಿಯಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನೀರಿನಲ್ಲಿ ಮುಳುಗಿದ್ದ ಬಾಲಕಿಯರ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮುಂಡರಗಿ ತಹಸೀಲ್ದಾರ ಆಶಪ್ಪ ಪೂಜಾರ ಭೇಟಿ ನೀಡಿ ಪರಿಶೀಲಿಸಿದರು. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.