ವಿಜಯಸಾಕ್ಷಿ ಸುದ್ದಿ, ಮುಂಡರಗಿ:
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆ ಜನಜೀವನ ಅಸ್ತವ್ಯಸ್ತಗೊಳಿಸಿದ್ದಲ್ಲದೇ, ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಅಕಾಲಿಕ ಮಳೆ ಜನರ ಜೀವಕ್ಕೆ ಕುತ್ತು ತರುತ್ತಿದೆ.
ಹೌದು, ಉಪ್ಪಿನ ಬೆಟಗೇರಿಗೆ ಹೋಗಿ ಕನ್ಯೆ ನೋಡಿ ಮರಳಿ ಊರಿಗೆ ಬರುತ್ತಿದ್ದ ಮುಂಡರಗಿ ತಾಲ್ಲೂಕಿನ ಯಕ್ಲಾಸಪುರ ಗ್ರಾಮದ ಟಿಪ್ಪುಸುಲ್ತಾನ್ (೨೬) ಎಂಬ ಯುವಕ ಹಳ್ಳ ದಾಟುವ ವೇಳೆ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಮೃತ ಟಿಪ್ಪುಸುಲ್ತಾನ್ ಗುರುವಾರ ವಧು(ಕನ್ಯೆ) ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ. ಕನ್ಯೆ ನೋಡಿ ವಾಪಸ್ ಬರುವಷ್ಟೊತ್ತಿಗೆ ಹೊತ್ತು ಮುಳುಗಿದೆ. ಹೀಗಾಗಿ ಉಪ್ಪಿನ ಬೆಟಗೇರಿಯಿಂದ ಮುಂಡರಗಿಗೆ ವಾಪಸ್ ಬಂದು ತಂದೆಗೆ ಯಕ್ಲಾಸಪುರದಲ್ಲಿ ಮಳೆ ಬರುತ್ತಿರುವ ಬಗ್ಗೆ ಕೇಳಿದ್ದನಂತೆ. ಆಗ ಟಿಪ್ಪು ತಂದೆ ‘ಇಲ್ಲಿ ತುಂಬಾ ಮಳೆ ಬರುತ್ತಿದೆ. ಹೀಗಾಗಿ ಇವತ್ತು ಬರಬೇಡ. ಇವತ್ತೊಂದಿನ ಮುಂಡರಗಿಯಲ್ಲಿದ್ದು ಶುಕ್ರವಾರ ಬೆಳಿಗ್ಗೆದ್ದು ಬಾ ಎಂದು ಹೇಳಿದ್ದರಂತೆ.

ತಂದೆ ಮಾತಿಗೆ ಒಲ್ಲೆನಲ್ಲದೇ ಮುಂಡರಗಿಯಲ್ಲಿ ಇರದೇ ‘ಹೂಂ ಎಂದಿದ್ದ ಟಿಪ್ಪು ಯಕ್ಲಾಸಪುರಕ್ಕೆ ಹೊರಟಿದ್ದಾನೆ. ನಿರಂತರ ಸುರಿಯುತ್ತಿರುವ ಮಳೆಗೆ ಯಕ್ಲಾಸಪುರದ ಕೋತಿ ಹಳ್ಳ ಮೈದುಂಬಿ ಹರಿಯುತ್ತಿದ್ದರೂ ಟಿಪ್ಪು ಬೈಕ್‌ನಲ್ಲಿ ಹಳ್ಳ ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ, ನೀರಿನ ಸೆಳುವಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ಅಸುನೀಗಿದ್ದಾನೆ.

ಮೃತ ಟಿಪ್ಪುಸುಲ್ತಾನ ಮೃತದೇಹ ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟೆಗೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎಎಸ್‌ಐ ಮಾರುತಿ ಜೋಗಂದಂಡಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.