ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಹಣದ ಅಡಚಣೆಗಾಗಿ ತಾಯಿ ನೆಕ್ಲೆಸ್ ಅಡವಿಟ್ಟಿದ್ದ ವ್ಯಕ್ತಿವೊರ್ವ ಮೃತಪಟ್ಟಿದ್ದರೂ ಆತನ ನಕಲಿ ಸಹಿ ಮಾಡಿ ಮುತ್ತೂಟ್ ಪಿನ್ ಕಾರ್ಪ್ ಕಂಪನಿ ಸಿಬ್ಬಂದಿ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕೆಲಸಗಾರ ಕೃಷ್ಣ ನಾಯಕ, ಬ್ರ್ಯಾಂಚ್ ಮ್ಯಾನೇಜರ್ ಹಾಸೀಮಸಾಬ ಮತ್ತು ಸಿಬ್ಬಂದಿಗಳ ಮೇಲೆ ಚೀಟಿಂಗ್ ಕೇಸ್ ದಾಖಲಾಗಿದೆ.
ಲಕ್ಷ್ಮೇಶ್ವರ ಪಟ್ಟಣದ ಮುತ್ತೂಟ್ ಪಿನ್ ಕಾರ್ಪ್ ಗೋಲ್ಡ್ ಲೋನ್ ಕಂಪನಿಯಲ್ಲಿ ಶಿವಕುಮಾರ್ ವಿ. ಎಂಬುವರು ಹಣದ ಅಡಚಣೆಗಾಗಿ ತನ್ನ ತಾಯಿ ಸಾವಿತ್ರಮ್ಮ ಇವರ 52.5 ಗ್ರಾಮ ತೂಕದ ಚಿನ್ನದ ನೆಕ್ಲೆಸ್ ಅಡವಿಟ್ಟು ಒಂದು ಲಕ್ಷ ಮೂವತ್ತು ಸಾವಿರ ರೂ.ಗಳನ್ನು 14-10-2022 ರಂದು ಸಾಲ ತೆಗೆದುಕೊಂಡಿದ್ದರು. ಆ ನಂತರ 6-11-2022 ರಂದು ಶಿವಕುಮಾರ್ ಮೃತಪಟ್ಟಿದ್ದರು.
ಇತ್ತ ಮೃತ ಶಿವಕುಮಾರ್ ತಾಯಿ ಹಾಗೂ ಸಹೋದರಿ ಭಾರತಿ ವಿರೂಪಾಕ್ಷಪ್ಪ ಆರ್ ಸೇರಿ ಲಕ್ಷ್ಮೇಶ್ವರದ ಮುತ್ತೂಟ್ ಪಿನ್ ಕಾರ್ಪ್ ಕಂಪನಿಗೆ ಅಡವಿಟ್ಟಿದ್ದ ನೆಕ್ಲೆಸ್ ಬಗ್ಗೆ ಕೇಳಲು ಹೋದಾಗ ಕಂಪನಿಯ ಕೃಷ್ಣ ನಾಯಕ ಶಿವಕುಮಾರ್ ಎಂಬ ಹೆಸರಿನಲ್ಲಿ ಯಾರೂ ಸಾಲ ಪಡೆದಿಲ್ಲ ಸುಳ್ಳು ಹೇಳಿ ಕಳುಹಿಸಿದ್ದರು.
ಆದರೆ ಇಷ್ಟಕ್ಕೆ ಸುಮ್ಮನಾಗದ ಮೃತ ಶಿವಕುಮಾರ್ ನ ಸಹೋದರಿ ಭಾರತಿ, ಸಂಬಂಧಪಟ್ಟ ಕಂಪನಿಯಲ್ಲಿ ಸಾಲದ ಬಗ್ಗೆ ಮಾಹಿತಿ ಪಡೆದಾಗ , ಅದರಲ್ಲಿ ಸಂಬಂಧಪಟ್ಟ ಕಂಪನಿಯ ಕೆಲಸಗಾರ ಕೃಷ್ಣ ನಾಯಕ ಹಾಗೂ ಬ್ರಾಂಚ್ ಮ್ಯಾನೇಜರ್ ಹಾಸೀಮಸಾಬ ಮತ್ತು ಸಿಬ್ಬಂದಿ ಎಲ್ಲರೂ ಮಿಲಾಪಿಯಾಗಿ, ಶಿವಕುಮಾರ್ 6-11-22 ರಂದು ಮೃತಪಟ್ಟಿದ್ದರೂ 02-02-23 ರಂದು ಮೃತಪಟ್ಟಿದ್ದ ಶಿವಕುಮಾರ್ ಹಣ ತುಂಬಿ ಬಂಗಾರದ ನೆಕ್ಲೆಸ್ ಬಿಡಿಸಿಕೊಂಡು ಹೋದಂತೆ ಮೃತನ ನಕಲಿ ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಾರೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ಕುರಿತು 0117/2023, IPC 1860(U/s-417,420,465,468,471,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.