ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶ
ವಿಜಯಸಾಕ್ಷಿ ಸುದ್ದಿ, ಗದಗ
ಬಿ.ಎಲ್.ಓ. ಗಳಿಗೆ ಮೇಲ್ವಿಚಾರಕರ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಗದಗ ತಾಲೂಕಿನ ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ ಪಾಟೀಲ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮತಗಟ್ಟೆ ಸಂಖ್ಯೆ 137ರಿಂದ 145 ರವರೆಗಿನ ಬಿಎಲ್ ಓ ಗಳಿಗೆ ಮೇಲ್ವಿಚಾರಕರಾಗಿ ನೇಮಿಸಲಾಗಿದೆ.
ಇದನ್ನೂ ಓದಿ ಬಿಎಲ್‌ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ
ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023-24 ನೇದ್ದಕ್ಕೆ ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ಹೊರಡಿಸಿದೆ. ಹೀಗಾಗಿ ವೇಳಾಪಟ್ಟಿಯಂತೆ ಪ್ರಸ್ತುತ ಪೂರ್ವ ಪರಿಷ್ಕರಣೆ ಚಟುವಟಿಕೆಗಳು ಜರುಗುತ್ತಿದ್ದು, ಅದರಂತೆ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಸಮೀಕ್ಷೆ ಕಾರ್ಯ ಜರುಗಿಸಿ ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿರುತ್ತಾರೆ. ಈ ಕುರಿತಂತೆ ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ.ಪಾಟೀಲ ಇವರನ್ನು ಮತಗಟ್ಟೆ ಸಂಖ್ಯೆ 137 ರಿಂದ 145ರವರೆಗಿನ ಬಿ.ಎಲ್.ಓ. ಗಳಿಗೆ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ದಿ.19-08-23ರಂದು ಮತಗಟ್ಟೆ ಸಂಖ್ಯೆ 137 ರಿಂದ 145 ಭೇಟಿ ನೀಡಿದ್ದರು. ಆದರೆ ಈ ಮತಗಟ್ಟೆ ಬಿ.ಎಲ್.ಓ ಗಳು ಆಯೋಗದ ನಿಗದಿತ ನಮೂನೆ -03ನ್ನು ಕಾಲೋಚಿತಗೊಳಿಸಿದ್ದು ಕಂಡು ಬಂದಿಲ್ಲ.
ಅಲ್ಲದೇ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದ್ದು ಕಂಡು ಬಂದಿಲ್ಲ. ಹಾಗೂ ನಿಗದಿತ ಪ್ರಮಾಣದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿರುವುದಿಲ್ಲ. ಈ ಕುರಿತಂತೆ ದಿ. 21.07.2023ರಿಂದ 21.8.2023 ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರ ಪಟ್ಟಿಯ ಕುರಿತಂತೆ ಮತಗಟ್ಟೆ ಸಂಖ್ಯೆ 137ರಿಂದ 145ರವರೆಗಿನ ಬಿ.ಎಲ್.ಓ. ಗಳ ಕಾರ್ಯವೈಖರಿ ಹಾಗೂ ಪ್ರಗತಿ ಕಾರ್ಯದ ಕುರಿತು ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ ಪಾಟೀಲ ಸರಿಯಾಗಿ ಮೇಲ್ವಿಚಾರಣೆ ಜರುಗಿಸದೇ ತೀವ್ರ ಕರ್ತವ್ಯ ಲೋಪವೆಸಗಿದ್ದಾರೆ.

ಅಷ್ಟೇ ಅಲ್ಲದೇ ಸರಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡು ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1950 ಕಲಂ 32 ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ ನಿಯಮಗಳು 2021 ರ ನಿಯಮ 3ರಲ್ಲಿನ (1)(2)(3)ಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ವಿವರಿಸಲಾಗಿದೆ.
ಹೀಗಾಗಿ ಹುಲಕೋಟಿ ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವಿ.ಬಿ. ಪಾಟೀಲ ಅವರನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ಗದಗ ತಹಸೀಲ್ದಾರ ಅವರ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಆದೇಶ ಹೊರಡಿಸಿದ್ದಾರೆ.