ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಇಲ್ಲದಿದ್ದರೂ ಫಾರ್ಮ್ ನಂ.3 ವಿತರಿಸಿದ್ದ ಕಂದಾಯ ಅಧಿಕಾರಿ…..
ವಿಜಯಸಾಕ್ಷಿ ಸುದ್ದಿ, ಗದಗ
ಫಾರ್ಮ್ ನಂ 3 ವಿತರಣೆಯಲ್ಲಿ ವಿಳಂಬ ಹಾಗೂ ಕರ್ತವ್ಯ ಲೋಪ ಎಸಗಿದ ನಗರಸಭೆ ಕಂದಾಯ ಅಧಿಕಾರಿ ಮಹೇಶ್ ಹಡಪದ ಅಮಾನತು ಆಗಿದ್ದಾರೆ.
ಈ ಕುರಿತು ಗದಗ ಡಿಸಿ ವೈಶಾಲಿ ಎಂ.ಎಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

01-04-2023ರಿಂದ 13-07-23. ರವರೆಗೆ ನಗರಸಭೆಯಿಂದ ಒಟ್ಟು 3148 ಫಾರ್ಮ್ ನಂ.3 ವಿವರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ್ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಮಯದಲ್ಲಿ ಪೌರಾಯುಕ್ತರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದರು.

ಆದರೆ ರಿ.ಸ.ನಂ 862+863-864 ವಸತಿ ವಿನ್ಯಾಸದಲ್ಲಿ 979 ಹಾಗೂ ಇನ್ನುಳಿದ ಬೇರೆ ಬೇರೆ ನಿವೇಶನ ಸೇರಿದಂತೆ ಒಟ್ಟು 1063 ಫಾರ್ಮ್ ನಂ.3 ವಿತರಣೆ ಮಾಡಲಾಗಿದೆ. ಆದರೆ ಇದರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣ ಪ್ರಮಾಣದ ನಿವೇಶನ ಅಭಿವೃದ್ಧಿ ಹೊಂದಿದ ಬಗ್ಗೆ ನಿರಪೇಕ್ಷಣಾ ಪತ್ರ ಪಡೆಯದೇ ಕಂದಾಯ ಅಧಿಕಾರಿ ಮಹೇಶ್ ಹಡಪದ ಫಾರ್ಮ್ ನಂ.3 ವಿತರಣೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಿದೆ.

ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ದಮ್ಮನಹಳ್ಳಿ ಅವರ ದೂರಿನ ಮೇರೆಗೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ್ ತನಿಖೆ ಮಾಡಿ ವರದಿ ಸಲ್ಲಿಸಿದ್ದರು.

ಅಪರ ಜಿಲ್ಲಾಧಿಕಾರಿಗಳ ವರದಿ ಆಧಾರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.