ವಿಜಯಸಾಕ್ಷಿ ಸುದ್ದಿ, ಗದಗ:
ಕೆಂಪುಕೋಟೆಯ ಮೇಲಿರುವ ತ್ರಿವರ್ಣ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುವ ಕಾಲ ಬರುತ್ತದೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ರವಿವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಲೆಕೆಟ್ಟ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಕಾಲ ಬರುತ್ತದೆ ಎಂದು ಹೇಳಿದರು. ಆದರೆ, ಈ ಬಗ್ಗೆ ಮಾತನಾಡದ ಬಸವರಾಜ್ ಬೊಮ್ಮಾಯಿ ಅವರು ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ ಎಂದು ಹರಿಹಾಯ್ದರು.
‘ನಮ್ಮ ಸರ್ಕಾರವಿದ್ದಾಗ ಯಾರಾದರೂ ಹೀಗೆ ಮಾತನಾಡಿದ್ದರೆ ಹತ್ತು ನಿಮಿಷದಲ್ಲಿ ರಾಜೀನಾಮೆ ಪಡೆಯುತ್ತಿದ್ದೆವು. ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಈಶ್ವರಪ್ಪ ವಿರುದ್ಧ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸುತ್ತೇವೆ. ಆದರೆ, ಪೊಲೀಸ್ ಅಧಿಕಾರಿಗಳು ಸರ್ಕಾರಿ ನೌಕರರ ಬದಲು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತ್ರಿವರ್ಣ ಧ್ವಜ ಕಾಂಗ್ರೆಸ್ ಪಕ್ಷದ ಧ್ವಜವಾಗಿತ್ತು. ಅಶೋಕ ಚಕ್ರ ಸೇರಿ ದೇಶದ ಧ್ವಜವಾಗಿದೆ. ಹೀಗಾಗಿ ರಾಷ್ಟ್ರ ಧ್ವಜವೇ ನಮ್ಮ ಧರ್ಮ’ ಎಂದರು.
ಬಿಜೆಪಿಯ ಅಧಿಕಾರಾವಧಿಯಲ್ಲಿ ಕಾಶ್ಮೀರ ವಿಚಾರ, 371, ಗೋಹತ್ಯೆ, ಮತಾಂತರ ಕಾಯ್ದೆ ಹೀಗೆ ಧರ್ಮಕ್ಕೆ ಸಂಬಂಧಿಸಿದಂತೆ ದೇಶ ಇಬ್ಭಾಗ ಮಾಡುವುದನ್ನು ಬಿಟ್ಟರೆ ಯಾವುದೇ ಜನಪರ ಕಾನೂನು ಜಾರಿಗೆ ತಂದಿಲ್ಲ. ಅಲ್ಲದೇ, ಕೃಷಿ ಕಾಯ್ದೆ ತಂದಿದ್ದನ್ನು ರೈತರ ಹೋರಾಟಕ್ಕೆಮಣಿದು ಬಲಿಷ್ಠ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಿತು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಕೊಡುಗೆ ನೀಡಿದೆ. ಆದರೆ, ಕಾಂಗ್ರೆಸ್ ಆಚಾರ, ವಿಚಾರ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡದೇ ಚುನಾವಣೆಯಲ್ಲಿ ಸೋತರಿಬಹುದು. ಆದರೆ, ಕಾರ್ಯಕರ್ತರು ಗೆಲ್ಲುವ ಆಸೆ ಕಳೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮಲ್ಲಿ ಹುಮ್ಮಸ್ಸು, ಉತ್ಸಾಹ, ನಂಬಿಕೆ ಕಾಣುತ್ತಿದೆ. ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ. ಉತ್ತರ ಕರ್ನಾಟಕ ಭಾಗದ 60ಕ್ಕೂ ಅಧಿಕ ಸ್ಥಾನಗಳ ಸಮೀಕ್ಷೆ ಬಂದಿದೆ. ಕಾರ್ಯಕರ್ತರು ಚುನಾವಣೆಗೆ ವ್ಯಕ್ತಿ ಮೇಲೆ ಹೋಗದೇ ಪಕ್ಷದ ಮೇಲೆ ಹೋಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಸಲೀಂ ಅಹ್ಮದ್, ಆರ್.ವಿ.ವೆಂಕಟೇಶ್, ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ಡಿ.ಆರ್.ಪಾಟೀಲ್, ಶ್ರೀಶೈಲಪ್ಪ ಬಿದರೂರ, ವ್ಹಿ.ಆರ್.ಗುಡಿಸಾಗರ, ಪರಮೇಶ್ವರ ನಾಯ್ಕ್, ಎಸ್.ಎನ್.ಪಾಟೀಲ್ ಇದ್ದರು.