ನಕಲಿ ಚಿನ್ನಾಭರಣ ಒತ್ತೆಯಿಟ್ಟು ಸಾಲ ಪಡೆದು ಮೋಸ; ದತ್ತು ಬಾಕಳೆ ಅಲಿಯಾಸ್ ಯಶ್ ಬಾಕಳೆ ಸೇರಿ ನಾಲ್ವರ ಮೇಲೆ ಚೀಟಿಂಗ್ ಕೇಸ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ನಕಲಿ ಚಿನ್ನಾಭರಣವನ್ನು ಅಡವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿರುವ ಎರಡು ಪ್ರಕರಣಗಳು ಇತ್ತೀಚೆಗೆ ವರದಿಯಾಗಿತ್ತು. ಇದೀಗ ಅಂಥದೇ ಇನ್ನೊಂದು ವಂಚನೆಯ ಪ್ರಕರಣ ಬೆಳಕಿಗೆ ಬಂದಿದ್ದು, ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿ.6.5.2022ರ ಮುಂಜಾನೆ 11 ಗಂಟೆಯಿಂದ 9.6.2022ರ ಸಂಜೆ 4 ಗಂಟೆಯ ನಡುವಿನ ಅವಧಿಯಲ್ಲಿ ಈ ವಂಚನೆ ನಡೆದಿದೆಯೆಂದು ಗದಗ ಶಹರದ ಹಳೆಯ ಡಿ.ಸಿ. ಕಛೇರಿಯ ಬಳಿಯಿರುವ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸ್ಥಳೀಯ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರಾದ ಸಿದ್ದರಾಮೇಶ್ವರ ನಗರದ ಪ್ರವೀಣ ಗಣೇಶ ನಿಡಗುಂದಿ(24), ಉಸಗಿನಕಟ್ಟಿ ಓಣಿಯ ರವಿ ಹತ್ತರಕಲ್(21), ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್ ಬಾಕಳೆ ಇವರೆಲ್ಲರ ಮೇಲೆ ಪ್ರಕರಣ ದಾಖಲಾಗಿದೆ.

ಈ ಮೂರು ಜನ ಸ್ವಲ್ಪವೇ ಬಂಗಾರದ ಲೇಪನವಿರುವ ಆಭರಣಗಳನ್ನು ತೋರಿಸಿ ಸಂಪೂರ್ಣ ಬಂಗಾರದ್ದೆಂದು ಸುಳ್ಳು ಹೇಳಿ ಅಡವಿಟ್ಟು 46,34,969 ರೂ.ಗಳ ಸಾಲ ಪಡೆದು ಬ್ಯಾಂಕಿಗೆ ಮೋಸವೆಸಗಿದ್ದಾರೆ.

ಆರೋಪಿಗಳು ಈ ಆಭರಣಗಳನ್ನು ಅಡವಿಡುವ ಸಮಯದಲ್ಲಿ ಬ್ಯಾಂಕಿನ ಆಭರಣ ಪರೀಕ್ಷಕ ಗದಗ ನಗರದ ಕಾಳಮ್ಮ ದೇವಸ್ಥಾನ ಬಳಿಯ ಮೋಹನ ಎಸ್.ಪ್ಯಾಟಿ ಕೂಡ ಆರೋಪಿತರೊಂದಿಗೆ ಶಾಮೀಲಾಗಿದ್ದು, ಆರೋಪಿಗಳು ಅಡವಿಟ್ಟ ಆಭರಣಗಳು 22 ಕ್ಯಾರೆಟ್ ಬಂಗಾರದ ಆಭರಣಗಳು ಎಂದು ಸುಳ್ಳು ಪ್ರಮಾಣಪತ್ರ ನೀಡುವುದರೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾರದಿಂದೀಚೆಗೆ ವರದಿಯಾಗುತ್ತಿರುವ ಮೂರನೇ ಪ್ರಕರಣ ಇದಾಗಿದ್ದು, ಕೆಲ ಆರೋಪಿಗಳು ಈ ಮೂರೂ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದನ್ನು ಗಮನಿಸಿದರೆ, ಇನ್ನೂ ಹಲವು ಬ್ಯಾಂಕ್‌ಗಳಲ್ಲಿಯೂ ಇಂಥದೇ ವಂಚನೆ ನಡೆಸಿ ಸಾಲ ಪಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸ್ ತನಿಖೆಯಿಂದ ವಿವರಗಳು ತಿಳಿದುಬರಬೇಕಿದೆ.


Spread the love

LEAVE A REPLY

Please enter your comment!
Please enter your name here