26 ಬಾರಿ ಫೋನ್ ಮಾಡಿ ಹಣ ಹಾಕುವಂತೆ ಒತ್ತಡ…….
ವಿಜಯಸಾಕ್ಷಿ ಸುದ್ದಿ, ಗದಗ
ತಾನು ಲೋಕಾಯುಕ್ತ ಡಿವೈಎಸ್‌ಪಿ ಆಗಿದ್ದು, ಕೇಳಿದ ಹಣ ನೀಡದಿದ್ದರೆ ನಿಮ್ಮ ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸುತ್ತೇವೆ ಎಂದು ಫೋನ್ ಕರೆಯ ಮೂಲಕ ಬೆದರಿಕೆಯೊಡ್ಡಿ, ಹಣ ನೀಡುವಂತೆ ಒತ್ತಾಯಿಸಿದ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಪ್ರಕರಣದ ಮೊದಲನೇ ಆರೋಪಿಯಾಗಿರುವ ಅಪರಿಚಿತನೊಬ್ಬ ಏಪ್ರಿಲ್ 25ರ ಮಧ್ಯಾಹ್ನ 3.53ರಿಂದ ರಾತ್ರಿ 8.32ರ ನಡುವಿನ ಅವಧಿಯಲ್ಲಿ ಗದಗ ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ-ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಬಳ್ಳಾರಿ ಮೂಲದ ಚಂದ್ರಶೇಖರ ಬಸಪ್ಪ ನಾಗಶೆಟ್ಟಿಯವರ ಮೊಬೈಲ್ ಸಂಖ್ಯೆಗೆ 26 ಬಾರಿ ಕರೆ ಮಾಡಿದ್ದರು.
ತಾನು ಲೋಕಾಯುಕ್ತದಲ್ಲಿ ಡಿವೈಎಸ್‌ಪಿ ಆಗಿದ್ದು, ಆನ್‌ಲೈನ್ ಮೂಲಕ 80 ಸಾವಿರ ರೂ. ಹಣವನ್ನು ಕೊಡಿ, ಇಲ್ಲವಾದರೆ ನಿಮ್ಮ ಕಚೇರಿ ಹಾಗೂ ಮನೆಯ ಮೇಲೆ ದಾಳಿ ಮಾಡುತ್ತೇವೆ ಎಂದು 2ನೇ ಆರೋಪಿ ರಾಜಕುಮಾರ್ ಪ್ರಸಾದ ಹಾಗೂ 3ನೇ ಆರೋಪಿ ರಾಮರಾಮ್ ಪಾಟೀಲ ಎಂಬುವರ ಮೊಬೈಲ್ ನಂಬರ್ ನೀಡಿದ್ದರು.
ಇವರ ಮೊಬೈಲ್ ನಂಬರ್‌ಗೆ ಹಣವನ್ನು ಫೋನ್‌ಪೇ ಮಾಡಿ ಎಂದಿದ್ದಲ್ಲದೆ, ಗದಗ ಶಹರ ಪೊಲೀಸ್ ಠಾಣೆಯ ಎಸ್‌ಐ ಆಗಿರುವ 4ನೇ ಆರೋಪಿ ಸಿಂಧೆ ಅವರ ಮೊಬೈಲ್ ನಂಬರ್ ಕೂಡ ನೀಡಿದ್ದರು.
ಎಸ್‌ಐ ಸಿಂಧೆ ಅವರ ನಂಬರ್‌ಗೆ ಸಂಪರ್ಕಿಸಿದಾಗ, ಹಣವನ್ನು ತನ್ನ ಬಳಿ ನೀಡಿ, ತಾನು ಫೋನ್ ಮಾಡಿದವರಿಗೆ ಹಣ ತಲುಪಿಸುತ್ತೇನೆ ಎಂದು ಒತ್ತಾಯದಿಂದ ಹಣ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿಗೆ ಸಂಬಂಧಿಸಿ, 0055/2023, ಐಪಿಸಿ ಸೆಕ್ಷನ್ 1860, ಕಲಂ 384,511ರ ಪ್ರಕಾರ ದೂರು ದಾಖಲಿಸಿಕೊಂಡಿರುವ ಶಹರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.