ವಿಜಯಸಾಕ್ಷಿ ಸುದ್ದಿ, ಗದಗ
ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಮದ್ಯ ಜಪ್ತಿ ಮಾಡಿ, ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ ಮುಂಜಾನೆ ಜರುಗಿದೆ.
ಗದಗ ತಾಲೂಕಿನ ಮುಳಗುಂದ ರಸ್ತೆಯ ಕಣವಿ ಕ್ರಾಸ್ ಬಳಿ ಅಬಕಾರಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಆರೋಪಿ ಮುಳಗುಂದ ಪಟ್ಟಣದ ವಿದ್ಯಾನಗರ ನಿವಾಸಿ ಮಹಾದೇವಪ್ಪ ಮಲ್ಲಪ್ಪ ಕಣವಿ ಎಂಬುವರು, ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ 33,724 ರೂ. ಮೌಲ್ಯದ 86.4 ಲೀಟರ್ ಮದ್ಯ ಸೀಜ್ ಮಾಡಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 11,14 ಹಾಗೂ 15ರ ಉಲ್ಲಂಘನೆಯಾಗಿದ್ದು, ಕಲಂ 32(1),38(ಎ) ಮತ್ತು 43 ರ ಅನ್ವಯ ಆರೋಪಿ ಮಹಾದೇವಪ್ಪ ಮಲ್ಲಪ್ಪ ಕಣವಿ ಎಂಬುವರನ್ನು ಬಂಧಿಸಿ, ಕಾರು ಕೂಡ ಸೀಜ್ ಮಾಡಲಾಗಿದೆ.
ಅಬಕಾರಿ ಡಿಸಿ ಭರತೇಶ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಶೈನಾಜ್ ಬೇಗಂ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿದ್ದಪ್ಪ ಹಿರೇತನದ ಹಾಗೂ ಆರ್ ಕೆ.ಗೌಡರ್ ಈ ಕಾರ್ಯಾಚರಣೆ ನಡೆಸಲಾಗಿದೆ.