- ಕೊಲೆಗಾರ ಪತ್ತೆಗೆ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ ಮಾಡಿ ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.
ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 8ರಂದು ರಾತ್ರಿ ಈ ಕೊಲೆ ನಡೆದಿದ್ದು, ಕೊಲೆಗೆ ಕೌಟುಂಬಿಕ ಕಲಹವೆ ಕಾರಣ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಕದಾಂಪೂರ ಗ್ರಾಮದ ಶಾಂತವ್ವ ಗುಡ್ಡಣ್ಣವರ (25) ಮಲಗಿದ್ದಾಗ ಪತಿ ರಾಜಪ್ಪ ಗುಡ್ಡಣ್ಣವರ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ಶಾಂತವ್ವ, ತನ್ನ ಗಂಡನೇ ಹರಿತವಾದ ವಸ್ತುವಿನಿಂದ ಚುಚ್ಚಿದ್ದಾನೆ ಎಂದು ಕಿರುಚಾಡಿ, ಸಹಾಯಕ್ಕೆ ಅಂಗಲಾಚಿದ್ದಾರೆ. ತಕ್ಷಣ ಶಾಂತವ್ವಳ ತಾಯಿ ಮತ್ತು ಸಂಬಂಧಿಕರು ಆಕೆಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಾಂತವ್ವಳ ಪತಿಯೇ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ರಾಜಪ್ಪ ಅಲಿಯಾಸ್ ಫಕ್ಕೀರಪ್ಪ ತಂದೆ ಬಸವಣ್ಣೆಪ್ಪ ಗುಡ್ಡಣ್ಣವರ ಪತ್ತೆಗಾಗಿ ನರಗುಂದ ಉಪವಿಭಾಗದ ಡಿಎಸ್‌ಪಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಇನ್ಸಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.
ಕೊಲೆಯಾದ ಶಾಂತವ್ವ ಮತ್ತು ರಾಜಪ್ಪ ದಂಪತಿಗೆ ಮದುವೆಯಾಗಿ 7-8 ವರ್ಷಗಳಾಗಿವೆ. ಈ ದಂಪತಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಗುವಿದೆ. ಆದರೆ ಕೆಲ ದಿನಗಳಿಂದ ಪತ್ನಿಯ ನಡವಳಿಕೆ ಬಗ್ಗೆ ಅನುಮಾನಗೊಂಡಿದ್ದ ರಾಜಪ್ಪ, ಪದೇ ಪದೇ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ.
ಅಕ್ಟೋಬರ್ 8ರಂದು ಸಹ ಇಬ್ಬರ ಮಧ್ಯೆ ಜಗಳವಾಗಿದೆ. ಸತಿಪತಿಗಳ ಜಗಳ ವಿಕೋಪಕ್ಕೆ ಹೋದ ಪರಿಣಾಮ, ಆಕ್ರೋಶಗೊಂಡ ರಾಜಪ್ಪ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.