ವಿಜಯಸಾಕ್ಷಿ ಸುದ್ದಿ, ಗದಗ:

ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾಯಲ್ ಎಲ್ ಫೀಲ್ಡ್ ಬೈಕ್ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗದಗನ ಮುಳಗುಂದ ನಾಕಾ ಬಳಿ ಇರುವ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರೇಶ್ ಗುಗ್ಗರಿ ಎಂಬುವವರಿಗೆ ಸೇರಿದ ಬೈಕ್ ಶೋ ರೂಂನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಶನಿವಾರ ಯುಗಾದಿ ಪಾಡ್ಯ ಇರುವುದರಿಂದ ಸಾಕಷ್ಟು ಜನ ಹೊಸ ಬೈಕ್ ಬುಕ್ ಮಾಡಿದ್ದರು. ಪಾಡ್ಯ ದಿನದಂದು ಹಲವು ಬೈಕ್ ರಿಲೀಸ್ ಆಗಬೇಕಿತ್ತು. ಪಾಡ್ಯದ ಮುನ್ನಾ ದಿನವೇ ಅಂದರೆ ಶುಕ್ರವಾರವೇ ಈ ದುರ್ಘಟನೆ ನಡೆದಿದ್ದು, ಬೈಕ್ ಬುಕ್ ಮಾಡಿರುವ ಜನರಿಗೆ ಭಾರೀ ನಿರಾಸೆ ಮೂಡಿಸಿದೆ.

ಮತ್ತೊಂದೆಡೆ ತಮ್ಮ ಕನಸಿನ ಬೈಕ್ ಖರೀದಿಸಿ ಸರ್ವಿಸ್ ಗೆ ಬಿಟ್ಟಿದ್ದ ಬೈಕ್ ಗಳು ಸಹ ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರೀ ಪ್ರಮಾಣದ ನಷ್ಟವನ್ನು ತಪ್ಪಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
