ವಿಜಯಸಾಕ್ಷಿ ಸುದ್ದಿ, ಗದಗ
ನಗರದ ಬ್ಯಾಂಕೊಂದರಲ್ಲಿ ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿದ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಬ್ಯಾಂಕಿನ ಜ್ಯುವೆಲ್ ಅಪ್ರೇಜರ್ ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
2022ರ ಏಪ್ರಿಲ್ 25ರಂದು ಬೆಳಿಗ್ಗೆ 11 ಗಂಟೆಯಿಂದ ಜೂನ್ 29ರ ಮದ್ಯಾಹ್ನ 4 ಗಂಟೆಯ ನಡುವಿನ ಅವಧಿಯಲ್ಲಿ ಪ್ರಕರಣದ 1ನೇ ಆರೋಪಿ ದತ್ತಾತ್ರೇಯ ಬಾಕಳೆ ಹಾಗೂ ಇತರ ಆರೋಪಿಗಳಾದ ಶಿವಮೊಗ್ಗ ಮೂಲದ ಅರುಣಕುಮಾರ್, ಆದಿಲ್.ಎ.ನಿಶಾನಿ, ಬೆಟಗೇರಿಯ ರವಿ.ಕೆ.ಹತ್ತರಕಲ್,
ಎಸ್.ಎಂ.ಕೃಷ್ಣ ನಗರದ ಗಣೇಶ.ಪಿ.ಮಾದರ, ಗಣೇಶ ಕಾಶಪ್ಪ ಹೊಂಬಳ, ಮಾಣಿಕ ಲಕ್ಕುಂಡಿ, ಬಸವೇಶ್ವರ ನಗರದ ದಾನೇಶ ಉಮಾದಿ, ರಾಕೇಶ ನವಲಗುಂದ, ಮಂಜುನಾಥ ಹೊಸಮನಿ, ಸುಚೀತ್‌ಕುಮಾರ ಮಲ್ಲಪ್ಪ ಹರಿವಾಣ, ದುಂಡಪ್ಪ ಹರ್ಷ ಕೊಟ್ಟೂರಶೆಟ್ಟರ,
ಸಿದ್ದಾರ್ಥ ಭರಡಿ, ನಾಗರಾಜ ಪೆದ್ದಪ್ಪ ರಾಮಗಿರಿ, ಅರುಣಕುಮಾರ್ ಶಶಿಧರ ಹೂಗಾರ, ಸಚಿನ್ ರಮೇಶ ಹರಿವಾಣ, ಸಂತೋಷ ವೀರಶೆಟ್ಟಿ ಇವರೆಲ್ಲ ನಗರದ ಹಳೇ ಡಿ.ಸಿ. ಕಚೇರಿ ಬಳಿಯಿರುವ ಐಡಿಬಿಐ ಬ್ಯಾಂಕ್‌ಗೆ ಬಂದು ಬಂಗಾರವೆಂದು ನಂಬಿಸಿ 4871.04 ಗ್ರಾಂ ತೂಕದ ಆಭರಣ ಅಡವಿಟ್ಟು 1,43,34000 ರೂ.ಸಾಲ ಪಡೆದಿದ್ದಾರೆ.
ಅಡವಿಡುವ ಸಮಯದಲ್ಲಿ ೧೮ನೇ ಆರೋಪಿಯಾದ ಬ್ಯಾಂಕಿನ ಜ್ಯುವೆಲ್ ಅಪ್ರೇಜರ್ ಸುರೇಶ ಗೋಪಾಲ ರೇವಣಕರ ಕೂಡ ಅಡವಿಟ್ಟ ಆಭರಣಗಳು 22 ಕ್ಯಾರೆಟ್‌ನ ಆಭರಣಗಳು ಎಂದು ಸುಳ್ಳು ಪ್ರಮಾಣಪತ್ರ ನೀಡಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ಬ್ಯಾಂಕಿನ ಪರಶುರಾಮ ಗುರುನಾಥ ರೊಟ್ಟಿಗವಾಡ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.