ಗದಗ ಜಿಲ್ಲಾ ಪೊಲೀಸರ ವಿಶೇಷ ಕಾರ್ಯಾಚರಣೆ; 91 ದೋಷಪೂರಿತ ಸೈಲೆನ್ಸರ್ ನಾಶ, ಅಪ್ರಾಪ್ತರ ವಿರುದ್ಧ ಪ್ರಕರಣ

0
Spread the love

ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ; ಎಸ್ಪಿ ನೇಮಗೌಡ….

Advertisement

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ವಿವಿಧ ಭಾಗಗಳಲ್ಲಿ ಕರ್ಕಶವಾಗಿ, ಭಯಬೀಳುವಂತೆ ಶಬ್ಧ ಮಾಡುತ್ತ, ಸಾರ್ವಜನಿಕರಿಗೆ ಕಿರಿಕಿರಿ ಹುಟ್ಟಿಸುತ್ತಿದ್ದ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸಮ್ಮುಖದಲ್ಲಿ ಶನಿವಾರ ಪೊಲೀಸರು ನಾಶಪಡಿಸಿದರು.

ಪೊಲೀಸ್ ಇಲಾಖೆಯ ತಪಾಸಣೆಯ ಸಮಯದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪತ್ತೆಯಾದ ದೋಷಪೂರಿತ ಸೈಲೆನ್ಸರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಹೀಗೆ ವಶಪಡಿಸಿಕೊಂಡ ಎಲ್ಲ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಮೂಲಕ ಸಂಚಾರ ಪೊಲೀಸ್ ಠಾಣೆಯ ಪಕ್ಕದಲ್ಲಿ ನಾಶ ಮಾಡಲಾಯಿತು.
ಈ ಕಾರ್ಯಾಚರಣೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಜಿಲ್ಲೆಯಾದ್ಯಂತ ಸತತ ಮೂರು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ, ದ್ವಿಚಕ್ರವಾಹನಗಳ ಗ್ಯಾರೇಜ್, ಅಟೋಮೊಬೈಲ್ ಅಂಗಡಿಗಳಲ್ಲಿನ ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.

ಜಿಲ್ಲೆಯಾದ್ಯಂತ ಒಟ್ಟು 27 ಕಡೆಗಳಲ್ಲಿ ತಪಾಸಣೆ ನಡೆಸಿ, 85 ದೋಷಪೂರಿತ ಸೈಲೆನ್ಸರ್‌ಗಳನ್ನು ಪತ್ತೆ ಮಾಡಲಾಗಿತ್ತು. ಕಾರ್ಯಾಚರಣೆಯ ವೇಳೆ 6 ಅಂಗಡಿಗಳಲ್ಲಿ ಇದ್ದ ದೋಷಪೂರಿತ ಸೈಲೆನ್ಸರ್‌ಗಳೂ ಸೇರಿದಂತೆ ಒಟ್ಟು 91 ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಯಿತು. ಇದಲ್ಲದೆ, ಅಪ್ರಾಪ್ತ ಚಾಲಕರ ವಿರುದ್ಧ 11 ಪ್ರಕರಣಗಳು ದಾಖಲಾಗಿವೆ ಎಂದರು.

ಈ ವಿಶೇಷ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿ, ಬಹುಮಾನವನ್ನೂ ನೀಡಲಾಗುವುದು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಇನ್ನೂ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ತಿಳಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕೆಲ ಪ್ರಯೋಗಗಳನ್ನೂ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾರ್ವಜನಿಕರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

-ಬಿ.ಎಸ್. ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಗದಗ

Spread the love

LEAVE A REPLY

Please enter your comment!
Please enter your name here