ವಿಜಯಸಾಕ್ಷಿ ಸುದ್ದಿ, ಗದಗ:

‘ಕಳೆದ ಎಪ್ರಿಲ್‌ನಲ್ಲಿ ಬೇಡಿಕೆ ಈಡೇರಿಸುವಂತೆ ನಡೆಸಿದ ಮುಷ್ಕರದಲ್ಲಿ ಪಾಲ್ಗೊಂಡು ವಜಾಗೊಂಡಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಮರು ನಿಯುಕ್ತಿ ಮಾಡಿಕೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದರು.
ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ‘ಕಳೆದ ಎಂಟು ತಿಂಗಳ ಹಿಂದೆ ಬೇಡಿಕೆ ಈಡೇರಿಸುವಂತೆ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿತ್ತು. ಆದರೆ, ಇದೀಗ ಮಾನವೀಯತೆ ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ವಜಾಗೊಂಡಿರುವ ಸಿಬ್ಬಂದಿಗಳನ್ನು ನಾಲ್ಕು ವಾರಗಳ ಒಳಗೆ ಸೇವೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದರು.
ಮರು ನಿಯುಕ್ತಿ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಸಾರಿಗೆ ಸಂಸ್ಥೆಯ ಎಂಡಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ವಜಾಗೊಂಡಿರುವ ಸಿಬ್ಬಂದಿಗಳು ಕೋರ್ಟ್ ಮೆಟ್ಟಿಲೇರಿರುವ ಕಾರಣ ಕೆಲ ಕಾನೂನಿನ ತೊಡಕಾಗಿದೆ. ಹೀಗಾಗಿ ಲೋಕ ಅದಾಲತ್ ಮೂಲಕ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದ ಅವರು, ಖಾಲಿ ಕುಳಿತಿರುವ ರಾಜಕಾರಣಿಗಳು ತಪ್ಪು ದಾರಿಗೆ ಎಳೆದು ತರುತ್ತಾರೆ. ಹೀಗಾಗಿ ಇಂತಹ ಹೋರಾಟಗಳಲ್ಲಿ ಪಾಲ್ಗೊಳ್ಳಬಾರದು. ಕಾನೂನು ಕೈಗೆ ತೆಗೆದುಕೊಳ್ಳಬಾರದು’ ಎಂದು ಸಚಿವ ಶ್ರೀರಾಮುಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರವಿ ದಂಡಿನ, ಎಸ್.ಎಚ್. ಶಿವನಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.