ಭಾಷಣಕ್ಕೆ, ಚಪ್ಪಾಳೆಗಷ್ಟೇ ಸೀಮಿತವಲ್ಲ; ಸದ್ದಿಲ್ಲದೇ ಕೋಮು ಸೌಹಾರ್ದತೆಯ ಕಾರ್ಯದಲ್ಲಿ ತೊಡಗಿದ ನ್ಯಾಯವಾದಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸಮಾಜದಲ್ಲಿ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗಿ ಅಶಾಂತಿ ಹೆಚ್ಚುತ್ತಿದೆ, ಎಲ್ಲರೂ ಸಾಮರಸ್ಯದಿಂದ ಬಾಳಬೇಕು, ಜಾತಿ-ಜಾತಿಗಳ ನಡುವಿನ ಅಂತರ ದೂರವಾಗಬೇಕು, ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬಾಳಬೇಕು…

ಇವೇ ಮುಂತಾದ ಸಿದ್ಧ ಭಾಷಣಗಳನ್ನು ನಾವು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವಲ್ಲ? ಆದರೆ, ಹಾಗೆ ಬರಿಯ ಮಾತನಾಡುವವರು ಎಷ್ಟು ಜನ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂಬ ಉತ್ತರ ಹುಡುಕಿ ಹೊರಟರೆ ಸಿಗುವದು ದೊಡ್ಡ ಸೊನ್ನೆಯೇ. ಮಾತುಗಳು, ಹೇಳಿಕೆಗಳು ಬರಿಯ ಭಾಷಣಕ್ಕೆ, ಚಪ್ಪಾಳೆಗಷ್ಟೇ ಸೀಮಿತವಾಗಿಬಿಡುತ್ತದೆ. ಆದರೆ, ಇಲ್ಲೊಬ್ಬರಿದ್ದಾರೆ. ಹೇಳದೇ ಮಾಡುವವನು ರೂಢಿಯೊಳಗುತ್ತಮನು ಎಂಬಂತೆ ಸದ್ದಿಲ್ಲದೇ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.

ಅವರು ಮುಕ್ತಾರ ಅಹ್ಮದ ಎ ಮೌಲ್ವಿ. ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು. ವಿಶೇಷವೆಂದರೆ, 169 ವರ್ಷಗಳ ಗದಗ ಜಿಲ್ಲೆಯ ಇತಿಹಾಸದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲನೇ ಮುಸ್ಲಿಂ ಸಮುದಾಯದ ನ್ಯಾಯವಾದಿಗಳು.

ಕರ್ನಾಟಕದಲ್ಲೇ ಜಿಲ್ಲಾ ವಕೀಲರ ಸಂಘದ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರೂ ಹೌದು. ಹೀಗೆ ವಿಶೇಷತೆಗಳು ಹಲವಾರು ಇವೆ. ಮುಕ್ತಾರ್ ಎಂತಲೇ ಕರೆಯಲ್ಪಡುವ ಇವರು ಲಕ್ಷ್ಮೇಶ್ವರದಲ್ಲಿ ಹುಟ್ಟಿ, ಗದಗದಲ್ಲೇ ಬೆಳೆದವರು.

ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು, ಸರ್ವರೂ ಭಾವೈಕ್ಯತೆಯಿಂದ ಬಾಳಬೇಕೆಂದು ಅಪಾರ ಕಳಕಳಿ ಹೊಂದಿರುವ ಮುಕ್ತಾರ್,  ಕಳೆದ ಏಳು ವರ್ಷಗಳಿಂದ ಜಿಲ್ಲಾ ವಕೀಲರ ಸಂಘದ ಕಛೇರಿಯಲ್ಲಿ ಐದು ದಿನಗಳ ಕಾಲ ವಿಜೃಂಭಣೆಯಿಂದ, ಅಷ್ಟೇ ಶ್ರದ್ಧಾ-ಭಕ್ತಿಯಿಂದ, ಸಂಪ್ರದಾಯವನ್ನು ಚಾಚೂ ತಪ್ಪದೇ ಗಣೇಶೋತ್ಸವ ಆಚರಣೆ ಮಾಡುತ್ತ ಬಂದಿದ್ದಾರೆ.

ಈಗ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಸಂಘದ ಸಾರಥ್ಯ ವಹಿಸಿದ ನಂತರ ಗಣೇಶ ಚತುರ್ಥಿಯ ದಿನ ಜಿಲ್ಲಾ ವಕೀಲರ ಸಂಘದ ಕಛೇರಿಯಲ್ಲಿ, ತಮ್ಮ ಸಹ ಉದ್ಯೋಗಿಗಳ ನೆರವಿನಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ-ಪುನಸ್ಕಾರದ ನೇತೃತ್ವ ವಹಿಸಿ, ಐದು ದಿನಗಳ ಕಾಲ ಗಣೇಶ್ ಹಬ್ಬ ಆಚರಿಸುತ್ತಾರೆ.  ಐದನೇ ದಿನಕ್ಕೆ ಗಣೇಶ ಮೂರ್ತಿಯನ್ನು ಅತಿ ಸಂಭ್ರಮದಿಂದ ವಿಸರ್ಜಿಸಲಾಗುತ್ತದೆ.

ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ವಿರಳವೆನಿಸುವ ಇಂಥ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆ, ಉದ್ದೇಶಗಳನ್ನು ಅವರ ಮಾತುಗಳಲ್ಲಿಯೇ ಕೇಳಿದರೆ ಚೆನ್ನ. ಅಲ್ಲವಾ?

“ಸಧ್ಯದ ಪರಿಸ್ಥಿತಿಯಲ್ಲಿ ಕೋಮುಸೌಹಾರ್ದವನ್ನು ಕೆಡಿಸುವ ಕಾರ್ಯಗಳೇ ಹೆಚ್ಚಾಗಿ ನಡೆಯುತ್ತಿವೆ. ಗಣೇಶೋತ್ಸವ ಕಾರ್ಯಕ್ರಮ ಎಲ್ಲ ಸಮುದಾಯದವರೂ ಸೇರಿ ಒಗ್ಗಟ್ಟಾಗಿ ಆಚರಿಸಬೇಕೆಂಬ ಉದ್ದೇಶದಿಂದಲೇ ಬಾಲಗಂಗಾಧರನಾಥ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದ್ದು. ಸಮುದಾಯದಲ್ಲಿ ಭಾವೈಕ್ಯತೆ ಬೆಳೆಯಬೇಕೇ ಹೊರತು, ನಮ್ಮನಮ್ಮಲ್ಲಿಯೇ ವೈಮನಸ್ಸು ಬೆಳೆಯಬಾರದು.

ನಮ್ಮಲ್ಲಿ ಅಂಥ ಉದ್ದೇಶವೇ ಇಲ್ಲದಂತೆ ನಮ್ಮ ಧರ್ಮದ ಸಂಪ್ರದಾಯಗಳನ್ನು ಆಚರಿಸುತ್ತೇವೆ, ಬೇರೆ ಧರ್ಮದ ಆಚರಣೆಗಳಿಗೂ ಗೌರವ ಕೊಟ್ಟು, ಆಚರಣೆ ಮಾಡುತ್ತಿದ್ದೇವೆ. ಒಬ್ಬ ನ್ಯಾಯವಾದಿಯಾಗಿ, ಸಾರ್ವಜನಿಕರೂ ಇಂಥ ಆಚರಣೆಗೆ ಮುಂದಾಗಿ, ಸಮಾಜದಲ್ಲಿ ಸದ್ಭಾವನೆ ಮೂಡಬೇಕೆಂಬ ಉದ್ದೇಶದಿಂದಲೇ ಕಳೆದೆ ಏಳು ವರ್ಷಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬಂದಿದ್ದೇವೆ.” ಎನ್ನುತ್ತಾರೆ ಮುಕ್ತಾರ ಅಹ್ಮದ್ ಎ. ಮೌಲ್ವಿ.

ಕೋಮು ಸೌಹಾರ್ದತೆಗೆ ಹೆಸರಾಗಿರುವ ಗದಗ ಜಿಲ್ಲೆಯವರೇ ಆಗಿರುವದರಿಂದ ಇದೊಂದು ವಿಶೇಷ ಎಂಬ ಭಾವನೆಯನ್ನೇ ಮುಕ್ತಾರ್ ಹೊಂದಿಲ್ಲ. ಒಟ್ಟಾರೆ, ಸಮುದಾಯದಲ್ಲಿರುವ ದ್ವೇಷದ ವಾತಾವರಣ ದೂರವಾಗಬೇಕು. ಕೆಲವರು ರಾಜಕೀಯ ಲಾಭದ ಉದ್ದೇಶದಿಂದ ಇಂಥ ಆಚರಣೆ ಮಾಡಲು ಹೊರಡುತ್ತಾರೆ. ಆದರೆ, ಅದು ಸಮಾಜಕ್ಕೆ ಯಾವುದೇ ಉತ್ತಮ ಸಂದೇಶವನ್ನು ನೀಡಲಾರವು.

ವಿದ್ಯಾವಂತರು, ಸಾಮಾಜಿಕ ಪ್ರಜ್ಞೆಯುಳ್ಳ ಪ್ರತಿಯೊಬ್ಬರೂ ಇಂಥ ಸೌಹಾರ್ದಯುತ ಆಚರಣೆಗಳನ್ನು ಪಾಲಿಸತೊಡಗಿದರೆ, ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳು ತಾನಾಗಿಯೇ ದೂರವಾಗಿ ಶಾಂತಿ ನೆಲೆಸುತ್ತದೆ ಎಂಬುದು ಮುಕ್ತಾರರ ಅಭಿಪ್ರಾಯವಾಗಿದೆ.

ಮುಕ್ತಾರರು ಜಾತ್ಯಾತೀತತೆಯ ಹಿನ್ನೆಲೆಯಲ್ಲಿ ಉತ್ತಮ ಕಾರ್ಯ ನಡೆಸುತ್ತಿದ್ದಾರೆ. ಸಾಮಾಜಿಕ ವಾತಾವರಣ ಹಾಳಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುಕ್ತಾರರಂಥಹ ವಿದ್ಯಾವಂತರು, ಯುವಕರು ಇಂಥ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕಿದೆ. ಸಮಾಜದಲ್ಲಿ ಕೋಮುಸೌಹಾರ್ದತೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕಿದೆ. ಪ್ರತಿಯೊಂದು ಜಾತಿ-ಧರ್ಮದವರೂ ನಾವೆಲ್ಲ ಒಂದು ಎಂಬ ಭಾವನೆಯನ್ನು ಅರಿತು-ಬೆರೆತು ಬದುಕಿದಾಗಲೇ ಎಲ್ಲರ ಬದುಕೂ ಹಸನಾಗುತ್ತದೆ.

ಹನಮರಡ್ಡಿ ಗೂಳರಡ್ಡಿ(ಅಪ್ಪಣ್ಣ), ಹೈಕೋರ್ಟ್ ನ್ಯಾಯವಾದಿ, ಧಾರವಾಡ

Spread the love

LEAVE A REPLY

Please enter your comment!
Please enter your name here