ಗದಗ-ಬೆಳದಡಿ ಸಂಪರ್ಕ ರಸ್ತೆ ಸಂರಕ್ಷಣೆಗೆ ತಡೆಗೋಡೆ ನಿರ್ಮಿಸಲು ಸಚಿವ ಪಾಟೀಲಗೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಈ ಬಾರಿ ಜಿಲ್ಲೆಯ ಶಿರುಂದ-ಯಲಿಶಿರುಂದ, ಬೆಳದಡಿ ತಾಂಡಾ ಹಾಗೂ ನಾಗಾವಿ ಭಾಗದಲ್ಲಿ ರಾಜ್ಯದಲ್ಲೇ ದಾಖಲೆ ಪ್ರಮಾಣದ ಮಳೆಯಾಗಿದ್ದು, ಗದಗ-ಬೆಳದಡಿ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತದೆ.

ನೀರಿನಿಂದ ರಸ್ತೆಯು ಸುರಕ್ಷಿತವಾಗಿ ಉಳಿಯಬೇಕಾದರೆ ತಡೆಗೋಡೆ ನಿರ್ಮಾಣ ಅವಶ್ಯಕವಾಗಿದೆ ಎಂದು ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ದಿ.11 ರಂದು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮನವಿ ಸಲ್ಲಿಸಿದರು. ಇಲ್ಲಿನ ಹಿರಿಕೆರೆಯು ಭರ್ತಿಯಾದ ಪರಿಣಾಮ ಅಂತರ್ಜಲದ ಮಟ್ಟ ಹೆಚ್ಚಾಗಿ ಸುಮಾರು 5 ಸಾವಿರ ಎಕರೆ ಹೊಲಗಳ ಬೆಳೆಗಳು ನಾಶವಾಗಿದ್ದು, ಜಮೀನಿನಲ್ಲಿ ಸಂಗ್ರಹವಾಗುವ ನೀರು ರಸ್ತೆಗೆ ಹರಿದು ರಸ್ತೆಯು ಹದಗೆಟ್ಟು ಹೋಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಜೊತೆಗೆ ಗದಗ-ಬೆಳದಡಿ ರಸ್ತೆಯ ಹಿತದೃಷ್ಠಿಯಿಂದ ತಡೆಗೋಡೆ ನಿರ್ಮಾಣ ಅಗತ್ಯವಾಗಿದೆ ಎಂದರು.

ಇತಿಹಾಸ ಪ್ರಸಿದ್ಧವಾದ ವಿಜಯನಗರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಬುಕ್ಕನಕೆರೆಯಲ್ಲಿ ತುಂಬಿಕೊಂಡಿರುವ ಅಪಾರ ಪ್ರಮಾಣದ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಹೊರಹಾಕಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಸಚಿವರು ಕ್ರಮ ವಹಿಸುವಂತೆ ಮನವಿ ಮಾಡಿದರು.

ತಾ.ಪಂ ಮಾಜಿ ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರಾದ ಬಿ.ಎಸ್ ಚಿಂಚಲಿ ಮಾತನಾಡಿ, ಮಳೆಯಿಂದ ಹಾಳಾಗಿರುವ ಇಚಲಹಳ್ಳದ ೨ ಕೆರೆಗಳನ್ನು ದುರಸ್ತಿಗೊಳಿಸುವುದರ ಜೊತೆಗೆ ಬೆಳೆಹಾನಿಯಾದ ರೈತರಿಗೆ ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ನಾಗಾವಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ನಾಗಾವಿ ತಾಂಡಾದ ಗಣೇಶ ಲಮಾಣಿ, ಗದಗ-ನಾಗಾವಿ ಸಂಪರ್ಕ ರಸ್ತೆ ಹಾಳಾಗಿರುವುದರಿಂದ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಸಂಚಾರಿಗಳಿಗೆ ತೀವ್ರ ತೊಂದರೆಯುಂಟಾಗಿದ್ದು, ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಿ ರಸ್ತೆ ಸುಧಾರಿಸಬೇಕೆಂದು ಮನವಿ ಮಾಡಿದರು.

ವಿ.ಪ ಸದಸ್ಯರಾದ ಎಸ್.ವಿ ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಣ್ಣ ಪಲ್ಲೇದ, ಜಿಲ್ಲಾಧಿಕಾರಿಗಳಾದ ವೈಶಾಲಿ. ಎಂ.ಎಲ್, ಸಿ.ಇ.ಓ. ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ ದೇವರಾಜು ಇವರ ಉಪಸ್ಥಿತಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ರಾಜು ಕುರಡಗಿ, ವಿಜಯಕುಮಾರ ಗಡ್ಡಿ, ಭೀಮಸಿಂಗ್ ರಾಠೋಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭದ್ರೇಶ ಕುಸಲಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here