ವಿಜಯಸಾಕ್ಷಿ ಸುದ್ದಿ, ಗದಗ
ವ್ಯಾಪಕ ಮಳೆಯಿಂದ ಬೆಳೆಹಾನಿಯಾಗಿದ್ದು ಪ್ರತಿ ಎಕರೆಗೆ ಸರಕಾರ 50 ಸಾವಿರ ರೂಪಾಯಿ ಪರಿಹಾರ ಕೊಡಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ರೈತರ ಕೃಷಿ ಭೂಮಿಗಳಲ್ಲಿದ್ದ ಶೇಂಗಾ, ಮೆಣಸಿನಗಿಡ, ಹತ್ತಿ, ಉಳ್ಳಾಗಡ್ಡಿ, ಗೋವಿನಜೋಳ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.
ಕೂಡಲೇ ರಾಜ್ಯ ಸರಕಾರ ರೈತರಿಗೆ ಬೆಳೆ ಪರಿಹಾರ ಹಾಗೂ ನಿರಂತರ ಮಳೆಯಿಂದ ಹಾನಿಯಾಗಿರುವ ಮನೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಪರಿಹಾರ ಬಿಡುಗಡೆ ವಿಳಂಬವಾದರೆ ಮುಂಬರುವ ದಿನಗಳಲ್ಲಿ ರೈತರ ಕ್ರಾಂತಿಯಿಂದ ರಾಜಕೀಯ ನಾಯಕರು ಬುದ್ಧಿ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುಲಿಕೇಶಿ ಪ್ರತಿಮೆ ಸ್ಥಾಪಿಸಲು ಆಗ್ರಹ
ಕನ್ನಡ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದ ಮುಂದೆ ಸ್ಥಾಪಿಸಬೇಕು. ಉತ್ತರ ಪಥೇಶ್ವರ ಹರ್ಷವರ್ಧನನು ಇಮ್ಮಡಿ ಪುಲಿಕೇಶಿಯ ಎದುರು ಸೋಲನ್ನು ಒಪ್ಪಿಕೊಂಡು, ಇಮ್ಮಡಿ ಪುಲಿಕೇಶಿಗೆ ‘ದಕ್ಷಿಣ ಪಥೇಶ್ವರ’ ಬಿರುದು ನೀಡಿದ್ದಾನೆ. ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮನಸ್ಸು ಮಾಡಿದ್ದರೆ ಭಾರತದ ಚಕ್ರರ್ತಿಯಾಗಿ ಮರೆಯಬಹುದಿತ್ತು’ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜು, ಜಿಲ್ಲಾಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಸಂಚಾಲಕ ಮಂಜುನಾಥ ಬುರಡಿ, ಶಿವಪ್ಪ ಚಿಕ್ಕಬಳ್ಳಾಪುರ, ರಾಮು ಮಂಡ್ಯ ಇದ್ದರು.