ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್; ವಿಜಯೇಂದ್ರ ವ್ಯಂಗ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಯಾರು ಏನು ಬೇಕಾದರೂ ತಿನ್ನಬಹುದು. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಭಂಡತನವನ್ನು ಯಾರೂ ಒಪ್ಪುವದಿಲ್ಲ. ಈ ರಾಜ್ಯದಲ್ಲಿ ಸಂಸ್ಕೃತಿ-ಪರಂಪರೆಗಳಿವೆ. ಧಾರ್ಮಿಕ ಶ್ರದ್ಧೆಯಿದೆ. ದೈವವನ್ನು ನಂಬಿ ಜೀವನ ನಡೆಸುವ ಅಪಾರ ಜನರಿದ್ದಾರೆ. ರಾಜಕಾರಣಿಗಳ ಹೇಳಿಕೆಯಿಂದ ಇತರರಿಗೆ ಘಾಸಿಯಾಗಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದರು.

ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಉನ್ನತ ಸ್ಥಾನದಲ್ಲಿರುವವರು, ರಾಜಕಾರಣದಲ್ಲಿ ಇರುವವರು ಬಹಿರಂಗವಾಗಿ ಹೀಗೆಲ್ಲ ಹೇಳಿಕೆ ನೀಡುತ್ತಿದ್ದಾರೆ.
ರಾಜಕಾರಣಿಗಳು ದೇವಸ್ಥಾನಕ್ಕೂ ಹೋಗುತ್ತಾರೆ. ಮಠಮಾನ್ಯಗಳಿಗೂ ತೆರಳುತ್ತಾರೆ. ಆದರೆ, ಅಲ್ಲಿ ಹೋದಾಗ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯ.

ಅಧಿಕಾರಕ್ಕೆ ಬಂದೇಬಿಟ್ಟೆವು ಎನ್ನುವ ಮಟ್ಟದ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಇವೆಲ್ಲವನ್ನೂ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ವೀರಶೈವ ಲಿಂಗಾಯತ ಧರ್ಮವನ್ನು ಒಡೆದಿಲ್ಲ ಎಂದು ತಪ್ಪೊಪ್ಪಿಕೊಂಡರೂ, ಪಶ್ಚಾತಾಪ ಪಡದೇ ಈಗ ಯುಟರ್ನ್ ತಿರುಗಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನೇಕ ಅಗ್ರಗಣ್ಯ ನಾಯಕರಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಲ್ಲ ಜಾತಿ-ವರ್ಗದ ಜನರೂ ಒಪ್ಪಿಕೊಂಡು ಮೆಚ್ಚಿರುವ ಧೀಮಂತ ನಾಯಕರು. ಅವರಿಗೆ ಇಂದು ಅಧಿಕಾರವಿಲ್ಲದಿದ್ದರೂ ಕೂಡ ಅಪಾರ ಬೆಂಬಲವಿದೆ. ಜನಮನ್ನಣೆಯೂ ಇದೆ. ಜನ ಎಲ್ಲೇ ಹೋದರೂ ಪ್ರೀತಿಯಿಂದಲೇ ಆದರಿಸುತ್ತಾರೆ. ಅವರು ಅಧಿಕಾರದಲ್ಲಿದ್ದಾಗ ಎಲ್ಲ ಸಮಾಜ-ವರ್ಗಕ್ಕೂ ತಾರತಮ್ಯವಿಲ್ಲದೇ ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಆದರೆ ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿಗಳೆನಿಸಿಕೊಂಡವರು, ಹಿರಿಯ ನಾಯಕರುಗಳು ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಾರದಿರುವಂಥ ವಾತಾವರಣ ಸೃಷ್ಟಿಯಾದಾಗ ಹಿಂದೆಯೂ ಜಾತಿ-ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುವ ಕೆಲಸ ಮಾಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಈಗ ವೀರ ಸಾವರ್ಕರ್ ರಂತಹ ಹೋರಾಟಗಾರರನ್ನು, ಧೀಮಂತ ಕ್ರಾಂತಿಕಾರಿಗಳನ್ನು ರಸ್ತೆಗೆ ತಂದು ಅವರಿಗೆ ಅವಮಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ಕೆಲಸವಲ್ಲ.

ನಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಉದ್ದೇಶಕ್ಕೆ ಇಂಥ ಅವಹೇಳನಕಾರಿ ಹೇಳಿಕೆ ನೀಡಿ, ನಡೆದುಕೊಳ್ಳುವದು ಯಾರಿಗೂ ಒಳ್ಳೆಯದಲ್ಲ ಎಂದರು.ಬಿಎಸ್ವೈಗೆ ಉನ್ನತ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ, ಅವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ಯಡಿಯೂರಪ್ಪನವರು ಯಾವುದೇ ಉನ್ನತ ಸ್ಥಾನ ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿರಲಿಲ್ಲ. ಇದನ್ನು ಉನ್ನತ ಸ್ಥಾನ ಎನ್ನುವದಕ್ಕಿಂತ, ದೊಡ್ಡ ಜವಾಬ್ದಾರಿಯನ್ನು ಪಕ್ಷ ಅವರ ಹೆಗಲಿಗೇರಿಸಿದೆ. ಹಿಂದೆಯೂ ಇಂಥ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದೆಯೂ ಅಷ್ಟೇ ಸಮರ್ಥವಾಗಿ ನಿರ್ವಹಿಸುತ್ತಾರೆ.

ಇನ್ನು, ಅವರ ಮೂಲಕ ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿರುವ ಕುರಿತು ಚರ್ಚೆ ನಡೆಯುತ್ತಿರುವ ಬಗ್ಗೆ ನೀವೇ ಮೊದಲ ಬಾರಿ ಹೇಳಿದ್ದು ಎಂದು ಚಟಾಕಿ ಹಾರಿಸಿ, ನಾನು ಸಂತೋಷದಿಂದಲೇ ಉಪಾಧ್ಯಕ್ಷ ಸ್ಥಾನ ನಿರ್ವಹಿಸುತ್ತಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಸಿದ್ಧರಾಮಯ್ಯರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ, ಸಂಪತ್ ಕುಮಾರರನ್ನು ಬಿಜೆಪಿಯವರು ಹಣದ ಆಮಿಷವೊಡ್ಡಿ ಖರೀದಿಸಿದ್ದಾರೆ, ತಾನು ಕಾಂಗ್ರೆಸ್ ಕಾರ್ಯಕರ್ತನೆಂದು ಹೇಳಿಕೆ ನೀಡುವಂತೆ ಬಿಜೆಪಿಯವರೇ ಪಿತೂರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಯಾರು ಏನೇ ಹೇಳಿದರೂ ಕೂಡ ಯಾವುದೇ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಲ್ಲಿ ನಾವಿರಬೇಕು. ಸಿದ್ಧರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಗೌರವಾನ್ವಿತ ವ್ಯಕ್ತಿ. ನಮ್ಮ ಪ್ರತಿಭಟನೆ ಎಂದಿಗೂ ಎಲ್ಲೆ ಮೀರಿ ಹೋಗಬಾರದು. ರಾಜ್ಯದಲ್ಲಿ ಹಿಂದೆಂದೂ ಇಂಥ ಘಟನೆ ನಡೆದಿಲ್ಲ ಎಂದರು.


Spread the love

LEAVE A REPLY

Please enter your comment!
Please enter your name here