ವಿಜಯಸಾಕ್ಷಿ ಸುದ್ದಿ, ಗದಗ
ಇಂಡಿಯಾ ಮಾರ್ಟ್ ಜಾಲತಾಣದಲ್ಲಿ ಖರೀದಿಸುವ ಉದ್ದೇಶದಿಂದ ಸ್ಟೀಲ್ ಮಟೀರಿಯಲ್ ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ, ಸ್ಟೀಲ್ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ಒದಗಿಸುತ್ತೇನೆ ಎಂದು ತನ್ನ ಖಾತೆಗೆ ಲಕ್ಷಾಂತರ ರೂ. ಹಣ ವರ್ಗಾಯಿಸುವಂತೆ ಹೇಳಿ, ಹಣವನ್ನು ಪಡೆದುಕೊಂಡು ಮೋಸ ಮಾಡಿರುವ ಕುರಿತು ದಾಖಲಾಗಿದ್ದ ಪ್ರಕರಣವನ್ನು ಗದಗ ಸಿಇಎನ್ ಪೊಲೀಸರು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗದಗ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ
2021ರ ಅಕ್ಟೋಬರ್ 4ರಂದು ದೂರುದಾರ ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಗ್ರಾಮದ ಗುತ್ತಿಗೆದಾರ ವಿನಾಯಕ ಮಂಜುನಾಥಗೌಡ ಪಾಟೀಲ, ಇಂಡಿಯಾ ಮಾರ್ಟ್ ಎಂಬ ಜಾಲತಾಣದಲ್ಲಿ 4 ಎಂಎಂ ಸ್ಟೀಲ್ ಮಟೀರಿಯಲ್ ಪರೀಕ್ಷಿಸಿದ್ದರು.
ನಂತರ ದೂರುದಾರರ ಮೊಬೈಲ್ ಸಂಖ್ಯೆಗೆ ಕರೆಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮಗೆ ಎಷ್ಟು ಮಟೀರಿಯಲ್ ಬೇಕಾಗಿದೆ ಎಂದು ವಿಚಾರಿಸಿ, ಬೇಡಿಕೆಯಿರುವ 6 ಟನ್ ಮೆಟೀರಿಯಲ್ಸ್ ಗೆ 2,54,880 ರೂ. ಮೊತ್ತವಾಗುತ್ತದೆ ಎಂದು ತಿಳಿಸಿ, ಖಾತೆಗೆ ಈ ಹಣವನ್ನು ಜಮಾ ಮಾಡಿದರೆ ನಿಮ್ಮ ವಿಳಾಸಕ್ಕೆ ನಾಳೆಯೇ ಮಟೀರಿಯಲ್ ಕಳಿಸುತ್ತೇವೆ ಎಂದು ನಂಬಿಸಿದ್ದ.
ದೂರುದಾರರು ಅವರು ತಿಳಿಸಿದ ಖಾತೆಗೆ ಹಣ ಜಮಾ ಮಾಡಿದ ನಂತರ, ನೀವು ತಿಳಿಸಿದಂತೆ 6 ಟನ್ ಮಟೀರಿಯಲ್ ಕಳಿಸಲು ಆಗುವದಿಲ್ಲ, 10 ಟನ್ ಆದರೆ ಕಳಿಸುತ್ತೇವೆ, ಮತ್ತೆ 4 ಟನ್ ಆರ್ಡರ್ ಮಾಡಿ, ಈಗ 2 ಟನ್ ಮಟೀರಿಯಲ್ ಹಣವನ್ನು ಖಾತೆಗೆ ಜಮಾ ಮಾಡಿ, ಉಳಿದ 2 ಟನ್ ಮಟೀರಿಯಲ್ ಮೊತ್ತವನ್ನು ಮಟೀರಿಯಲ್ ತಲುಪಿದ ಮೇಲೆ ಹಾಕಿ ಎಂದು ನಂಬಿಸಿ, 28-9-2021ರಂದು 85 ಸಾವಿರ ರೂ. ಸೇರಿ ಒಟ್ಟೂ 3,39,880 ರೂ. ಹಣವನ್ನು ಖಾತೆಗೆ ಹಾಕಿಸಿಕೊಂಡು ಮಟೀರಿಯಲ್ ಕಳಿಸಿಕೊಡದೇ, ಫೋನ್ ಕರೆಯನ್ನೂ ಸ್ವೀಕರಿಸದೇ ಮೋಸ ಮಾಡಿದ್ದಾರೆ ಎಂದು ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ)(ಡಿ) ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸದರಿ ಪ್ರಕರಣದ ಕುರಿತು ಡಿಸಿ ಆರ್ ಬಿ ಡಿಎಸ್ಪಿ ತಮ್ಮರಾಯ ಪಾಟೀಲ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಪಿಐ ಮಹಾಂತೇಶ.ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಬಿ. ಪಮ್ಮಾರ, ಎಸ್.ಎಚ್. ಅಂಗಡಿ, ಎಫ್.ಆರ್. ಕಂತಿ ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಕಾರ್ಯಚರಣೆ ನಡೆಸಿ, ಪ್ರಕರಣವನ್ನು ಬೇಧಿಸಿ, ಮುಂಬೈ ಮೂಲದ ಆರೋಪಿ ಪ್ರದೀಪ ಓಂಪ್ರಕಾಶ ದುಬೆ ಎಂಬುವನನ್ನು ಸೆ.12ರಂದು ಪತ್ತೆಮಾಡಿ ಬಂಧಿಸಿದ್ದಾರೆ.
ಆರೋಪಿತನಿಂದ 2.5 ಲಕ್ಷ ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸದರಿ ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಪತ್ತೆಮಾಡಿ, ಕಾನೂನಿನನ್ವಯ ಕ್ರಮ ಜರುಗಿಸಿದ ತನಿಖಾಧಿಕಾರಿಗಳಿಗೆ ಹಾಗೂ ಗದಗ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಶ್ಲಾಘಿಸಿದ್ದಾರೆ.
ಇತ್ತೀಚೆಗೆ ಸೈಬರ್ ಜಾಲತಾಣಗಳ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೊಳಗಾಗುತ್ತಿದ್ದು, ಯಾವ ಕಾರಣಕ್ಕೂ ತಮ್ಮ ವೈಯಕ್ತಿಕ ಹಾಗೂ ಇತರ ಮಾಹಿತಿಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡದಂತೆ ವಿನಂತಿಸಿದ್ದು, ಯಾರಾದರೂ ಸೈಬರ್ ವಂಚನೆಗೆ ಒಳಗಾದಲ್ಲಿ ನೇರವಾಗಿ ಅಥವಾ 112/1930 ಮುಖಾಂತರ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.