ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಬ್ಯಾಂಕ್; 85 ಸಾವಿರ ರೂ. ದಂಡ ವಿಧಿಸಿದ ಆಯೋಗ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ

Advertisement

ಕನ್ನಡದಲ್ಲಿ ಬರೆದ ಕಾಸೋಲೆ (ಚೆಕ್) ಯನ್ನು ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ.ದಂಡ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಧಾರವಾಡದ ಇಂಗ್ಲೀಷ್ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಕನ್ನಡದಲ್ಲಿ ಬರೆದು ಸಲ್ಲಿಸಿದ್ದ ಕಾಸೋಲೆ (ಚೆಕ್) ಯನ್ನು ಹಳಿಯಾಳದ ಎಸ್‌ಬಿಐ ಶಾಖೆ ತಿರಸ್ಕರಿಸಿತ್ತು. ಇದರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ದೂರುದಾರರ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದ್ದರೂ ಕೂಡ ಕೇವಲ 6 ಸಾವಿರ ರೂ. ಮೌಲ್ಯದ ಚೆಕ್ಕನ್ನು ಕನ್ನಡ ಭಾಷೆಯಲ್ಲಿ ಬರೆದುದಕ್ಕಾಗಿ ಅಮಾನ್ಯ ಮಾಡಿರುವುದನ್ನು, ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ಹಳಿಯಾಳ ಎಸ್‌ಬಿಐ ಬ್ಯಾಂಕ್ ಶಾಖೆಯು ಫಿರ್ಯಾದಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪು ನೀಡಿದ್ದಾರೆ .

ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪು ವಿಶೇಷ ಹಾಗೂ ಮಹತ್ವದ್ದೆನಿಸಿದೆ.


Spread the love

LEAVE A REPLY

Please enter your comment!
Please enter your name here