ಸಾರಿಗೆ ನಗರದಲ್ಲಿ ಘಟನೆ……
ವಿಜಯಸಾಕ್ಷಿ ಸುದ್ದಿ, ಗದಗ
ಒಂದೇ ದಿನ ಒಂದೇ ಏರಿಯಾದ ಎರಡು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜರುಗಿದೆ.
ಗದಗ ತಾಲೂಕಿನ ಕಳಸಾಪೂರ ರಸ್ತೆಯಲ್ಲಿ ಬರುವ ಸಾರಿಗೆ ನಗರದಲ್ಲಿ ಈ ಕಳ್ಳತನ ನಡೆದಿದೆ.
ಪ್ರಕರಣ ಒಂದರಲ್ಲಿ ಮನೆಯೊಂದರ ಮುಂದಿನ ಬಾಗಿಲಿನ ಲಾಕರ್ ಕೀಲಿ ಮೀಟಿ ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಟ್ರೆಝರಿಯಲ್ಲಿರಿಸ್ದ 1.15 ಲಕ್ಷ ರೂ ಬೆಲೆಬಾಳುವ ಆಭರಣಗಳನ್ನು ದೋಚಿದ್ದಾರೆ.
ಪಾರ್ವತಿ ಮಾರುತೆಪ್ಪ ಜೋಗಿನ ಎಂಬುವರು ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾರ್ಚ್ 16ರ ರಾತ್ರಿ 10 ಗಂಟೆಯಿಂದ ಮಾರ್ಚ್ 17ರ ನಸುಕಿನ 5.30ರ ನಡುವಿನ ಸಮಯದಲ್ಲಿ ಕಳ್ಳರು ಕೈಚಳಕ ತೋರಿದ್ದು, ಟ್ರೆಝರಿಯಲ್ಲಿದ್ದ 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಬಾಳುವ ಬಂಗಾರದ ಉಂಗುರ, 2.5 ಗ್ರಾಂ. ತೂಕದ 15 ಸಾವಿರ ರೂ. ಬೆಲೆಬಾಳುವ 3 ಸಣ್ಣ ಉಂಗುರ, 25 ಸಾವಿರ ರೂ. ಬೆಲೆಯ 5 ಗ್ರಾಂ ತೂಕದ ಬಂಗಾರದ ಸುತ್ತುಂಗುರ, 25 ಸಾವಿರ ರೂ. ಬೆಲೆಬಾಳುವ 5 ಗ್ರಾಂ ತೂಕದ ಡಿಸೈನ್ ಉಂಗುರ, 5 ಗ್ರಾಂ. ತೂಕದ 25 ಸಾವಿರ ರೂ ಬೆಲೆಯ ಬುಗಡಿ ಹೀಗೆ ಒಟ್ಟೂ ಅಂದಾಜು 1,15,000 ರೂ ಬೆಲೆಬಾಳುವ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮನೆಯೊಂದರ ಬಾಗಿಲಿನ ಚಿಲಕದ ಕೊಂಡಿ ಮೀಟಿ ತೆಗೆದು ಮನೆಯೊಳಗೆ ಟ್ರೆಝರಿಯಲ್ಲಿಟ್ಟಿದ್ದ 1.80 ಲಕ್ಷ ರೂ. ಬೆಲೆಬಾಳುವ ಆಭರಣ ಹಾಗೂ 50 ಸಾವಿರ ರೂ. ನಗದು ಹಣವನ್ನು ಕಳ್ಳತನ ನಡೆಸಿರುವ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ವಿಜಯಲಕ್ಷ್ಮೀ ರುದ್ರಪ್ಪ ಬಂಗಾರಿಯವರಿಗೆ ಸೇರಿರುವ ಮನೆಯೇ ಕಳ್ಳತನವಾಗಿದೆ. ವಾಸದ ಮನೆಯ ಚಿಲಕದ ಕೊಂಡಿ ಮೀಟಿ ತೆರೆದು, ಟ್ರೆಝರಿಯಲ್ಲಿದ್ದ 15 ಗ್ರಾಂ.ನ 75 ಸಾವಿರ ರೂ. ಬೆಲೆಯ ಬಂಗಾರದ ಚೈನ್, 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಯ ಬಂಗಾರದ ಸುತ್ತುಂಗುರ, 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಯ ಬಂಗಾರದ ಬಿಳಿ ಹರಳಿನ ಉಂಗುರ, 15 ಸಾವಿರ ರೂ ಬೆಲೆಯ ಬಂಗಾರದ ಬೆಂಡವಾಲಿ, 15 ಸಾವಿರ ರೂ ಬೆಲೆಯ ಬಂಗಾರದ ಮೂಗುಬೊಟ್ಟು, 2 ಗ್ರಾಂ. ತೂಕದ 10 ಸಾವಿರ ರೂ ಬೆಲೆಯ ಚಿನ್ನದ ಸಣ್ಣ ಉಂಗುರ, 15 ಸಾವಿರ ರೂ. ಬೆಲೆಬಾಳುವ ಬೆಳ್ಳಿಯ ಆಭರಣಗಳು ಹಾಗೂ 50 ಸಾವಿರ ರೂ. ನಗದು ಹೀಗೆ ಒಟ್ಟೂ 2,30,000 ರೂ. ಬೆಲೆಬಾಳುವ ಬಂಗಾರ ಹಾಗೂ ನಗದನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.