ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಟ್ಟಣದ ಬಸ್ತಿಕೇರಿ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬಾತ ಕೊರೋನಾದಿಂದ ಬದುಕಿದ್ದರೂ ದೃಷ್ಟಿದೋಷದಿಂದ ಸಂಕಷ್ಟ ಅನುಭವಿಸುತ್ತಿದ್ದರು. ಕುಟುಂಬ ನಿರ್ವಹಣೆಯೇ ಕಷ್ಟವಾದ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಮನೆಯೂ ಬಿದ್ದು ಕುಟುಂಬ ಬೀದಿಗೆ ಬಂದು ನಿಲ್ಲುವಂತಾಯಿತು.
ತಾಯಿ, ಪತ್ನಿ, ಇಬ್ಬರು ಮಕ್ಕಳಿರುವ ಬಡ ಕುಟುಂಬ ಬಸವರಾಜ ಮತ್ತು ಅವನ ತಾಯಿಗೆ ಕೊರೋನಾ ಸೋಂಕು ತಗುಲಿತ್ತು. ತಾಯಿ ದೇವರ ದಯದಿಂದ ಪಾರಾದರೆ, ಮನೆಗೆ ಆಧಾರ ಸ್ತಂಭವಾಗಿದ್ದ ಬಸವರಾಜ ಬ್ಲಾಕ್ ಫಂಗಸ್‌ನಿಂದ ದೃಷ್ಟಿ ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಮನೆಗೆ ಆಧಾರ ಸ್ತಂಭವಾಗಿದ್ದ ಬಸವರಾಜ ಮನೆಹಿಡಿದು ಕುಳಿತಾಗ ಆತನ ಹೆಂಡತಿಯೇ ಕೂಲಿ ಮಾಡಿ ಕುಟುಂಬ ಸಾಗಿಸುತ್ತಿದ್ದಾಳೆ.
ಇದೀಗ ಇದ್ದ ಒಂದು ಮನೆಯೂ ಮಳೆಗೆ ಆಹುತಿಯಾಗಿದ್ದು, ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದಿತ್ತು. ಕಣ್ಣು ಕಾಣದ ಗಂಡ, ಎರಡು ಪುಟ್ಟ ಮಕ್ಕಳು, ವಯಸ್ಸಾದ ಅಜ್ಜಿ ಬಿದ್ದ ಮನೆ ಸಂಕಷ್ಟಗಳ ಸರಮಾಲೆಯಲ್ಲಿ ಬಸವರಾಜ ಪತ್ನಿ ನಿರ್ಮಲಾ ಜೀವನ ಸಾಗಿಸುತ್ತಿದ್ದಾರೆ.
ದುಡಿದು ಜೀವನ ಸಾಗಿಸುತ್ತಿದ್ದ ಬಸವರಾಜನ ಕುಟುಂಬಕ್ಕೆ ಸರ್ಕಾರ ಆಸರೆಯಾಗಿ ಕೂಡಲೇ ನಿವೇಶನ, ಮಾಶಾಸನ ನೀಡಬೇಕು ಎಂದು ಪಟ್ಟಣದ ಶಂಕರ ಬ್ಯಾಡಗಿ, ಗುರುಪುತ್ರ ಮೇಡ್ಲೇರಿ ಅವರು ತಹಸೀಲ್ದಾರರಿಗೆ ಮಾಹಿತಿ ನೀಡಿದರು.
ಸುದ್ದಿ ತಿಳಿಯುತ್ತಿದ್ದಂತೆ ನೊಂದ ಕುಟುಂಬದ ನೆರವಿಗೆ ತಹಸೀಲ್ದಾರ ಪರಶುರಾಮ ಸತ್ತಿಗೇರಿ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ತಾತ್ಕಾಲಿಕವಾಗಿ ಪುರಸಭೆ ಕ್ವಾಟರ್ಸ್ ನಲ್ಲಿ ಆಶ್ರಯ ವ್ಯವಸ್ಥೆ, ಆಹಾರದ ಕಿಟ್ ನೀಡಿ ಮಾನವೀಯ ಕಾರ್ಯ ಮಾಡಿದರು. ಒಂದೇ ಗಂಟೆಯಲ್ಲಿ ಆತನಿಗೆ ವಿಕಲಚೇತನ ಮಾಶಾಸನ ದೊರಕುವಂತೆ ಮಾಡುವ ಮೂಲಕ ತಹಸೀಲ್ದಾರ ಅವರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಕೊರೋನಾ ಜೀವನ ಹಾಳು ಮಾಡಿದರೆ ಮಳೆ ಬದುಕನ್ನೇ ಕಸಿದುಕೊಂಡಿದೆ. ಇದ್ದ ಒಂದು ಮನೆಯು ಮಳೆಯಿಂದ ಬಿದ್ದಿದ್ದು ನಮ್ಮ ಬದುಕು ಈಗ ಬೀದಿಗೆ ಬಂದಿದೆ. ಚಿಕ್ಕ ಮಕ್ಕಳನ್ನು, ತಾಯಿಯನ್ನು ಪತ್ನಿಯೇ ಕೂಲಿ ನಾಲಿ ಮಾಡಿ ಸಲುಹುವಂತಾಗಿದೆ. ಸರಕಾರ ನಮಗೆ ಸಹಾಯ ಮಾಡಲಿ, ಮಾಶಾಸನ, ಆಶ್ರಯ ನಿವೇಶನ ಕಲ್ಪಿಸಬೇಕು.
-ಬಸವರಾಜ್ ನಿಂಗಪ್ಪ ಮಡಿವಾಳರ, ನೊಂದ ವ್ಯಕ್ತಿ.