ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಕುಂಭದ್ರೋಣ ಮಳೆಗೆ ಗ್ರಾಮಸ್ಥರು ತೊಂದರೆ ಅನುಭವಿಸಿದರು. ಹಲವಾರು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೊಳಗಾದರು.
೫೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಪ್ರಸಿದ್ಧ ದಿಂಗಾಲೇಶ್ವರ ಮಠದ ಆವರಣ ಹಾಗೂ
ಮಠದ ಹತ್ತಿರ ಇರುವ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಹೊಂಡವಾಗಿ ಮಾರ್ಪಟ್ಟಿದೆ.
ಗ್ರಾಮದ ಶೇಖಪ್ಪ ಕಡೆಮನಿ, ಮಹೇಶ ಗುಡಗೇರಿ, ಬಸವಣ್ಣೆಪ್ಪ ಗುಡಗೇರಿ, ಅಣ್ಣಪ್ಪ ಗುಡಗೇರಿ, ರಾಮಪ್ಪ ಗುಡಗೇರಿ, ಅರವಿಂದ ಕಡೆಮನಿ, ಶೇಖಪ್ಪ ನಿಟ್ಟೂರ, ಬಸಪ್ಪ ಕಡೆಮನಿ, ಎಲ್ಲವ್ವ ಕಡೆಮನಿ, ಸುಮಾ ಪಟ್ಟೇದ, ಮುದುಕಪ್ಪ ಪಟ್ಟೇದ, ಶ್ಯಾಮಣ್ಣ ಕಡೆಮನಿ, ಚಿತ್ತಪ್ಪ ಕಟ್ಟಿಮನಿ ಸೇರಿದಂತೆ ಅನೇಕ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯ, ಬಟ್ಟೆ ಬರೆ ಹಾಗೂ ಪಾತ್ರೆಗಳು ತೇಲಿ ಹೋಗಿವೆ.
ಗ್ರಾಪಂ ಸದಸ್ಯ ಶ್ಯಾಮಪ್ಪ ಕಡೆಮನಿ ಅವರ ದನದ ಕೊಟ್ಟಿಗೆಗೆ ನೀರು ನುಗ್ಗಿ ಎತ್ತುಗಳ ಮೊಣಕಾಲಿನವರೆಗೆ ನೀರು ನಿಂತು ತೊಂದರೆ ಅನುಭವಿಸಿದವು.
ತೇಲಿ ಹೋದ ಕುರಿಗಳು
ಮಳೆಯ ರಭಸಕ್ಕೆ ರಸ್ತೆ, ಚರಂಡಿ ಮೇಲೆ ನೀರು ಹರಿದು ಕುರಿಗಾಹಿಗಳು ತಮ್ಮ ಕುರಿಗಳನ್ನು ರಕ್ಷಿಸಲು ಪರದಾಡಬೇಕಾಯಿತು. ಮಹಾಂತೇಶ ಈರಗಾರ ಎನ್ನುವವರ ಸುಮಾರು ಕೆಲವು ಕುರಿಗಳು ನೀರಿನಲ್ಲಿ ತೇಲಿ ಹೋಗಿವೆ ಎನ್ನಲಾಗಿದೆ.
ಗ್ರಾಮದ ಚರಂಡಿಗಳು ಕಿರಿದಾಗಿರುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ಊರೆಲ್ಲ ಹರಿದು ತೊಂದರೆಯಾಗುತ್ತಿದೆ. ಚರಂಡಿಗಳನ್ನು ಎತ್ತರಿಸಿ ಅಗಲೀಕರಿಸುವ ಅಗತ್ಯವಿದೆ. ಮಳೆಯಿಂದ ಸಾವಿರಾರು ಎಕರೆ ಪ್ರದೇಶ ಭೂಮಿ ಜವಳು ಬಿದ್ದಿದ್ದು ರೈತರು ಬೀದಿಗೆ ಬರುವಂತಾಗಿದೆ. ಆದ್ದರಿಂದ ನಷ್ಟ ಅನುಭವಿಸಿದವರಿಗೆ ಶೀಘ್ರ ಪರಿಹಾರ ಘೋಷಿಸಿ ಅನೂಕೂಲ ಮಾಡಿಕೊಡಬೇಕು.
-ಫಕ್ಕೀರೇಶ ಮ್ಯಾಟಣ್ಣವರ, ಯಲ್ಲಪ್ಪ ಸೂರಣಗಿ, ಗ್ರಾ.ಪಂ.ಮಾಜಿ ಅಧ್ಯಕ್ಷರು.