ಸಿದ್ದರಾಮಯ್ಯ ಸುಳ್ಳು ಹೇಳಿಕೆ ಕೊಡುವದನ್ನು ನಿಲ್ಲಿಸಲಿ
ವಿಜಯಸಾಕ್ಷಿ ಸುದ್ದಿ, ಗದಗ
ಕೆಂಪಯ್ಯ ಯಾರೆಂಬುದು ಗೊತ್ತಿಲ್ಲ. ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಂತ ಹೇಳ್ತಾರೆ. ಹೀಗೆ ಅದೆಷ್ಟೋ ಅಸೋಸಿಯೇಷನ್ಗಳನ್ನು ಹುಟ್ಟುಹಾಕಿಕೊಂಡು ತಾನೇ ಅಧ್ಯಕ್ಷ ಎಂದು ಓಡಾಡುವರಿದ್ದಾರೆ. ಅಂಥವರಲ್ಲೊಬ್ಬ ಈ ಕೆಂಪಯ್ಯ. ಸಿದ್ಧರಾಮಯ್ಯ ಇವರನ್ನು ಕರೆಸಿಕೊಂಡು ಭೇಟಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. 40 ಪರ್ಸೆಟೇಜ್ ಭ್ರಷ್ಟಾಚಾರ ನಡೆದಿದೆಯೆಂಬ ಆರೋಪವನ್ನು ಮಾಡುತ್ತಿದ್ದಾರೆ. ರಾಜ್ಯದ ಜನ ಈ ಭ್ರಷ್ಟಾಚಾರವನ್ನು ಅರ್ಥಮಾಡಿಕೊಂಡರೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಗಳನ್ನು ಎಲ್ಲೂ ಅಡ್ಡಾಡಲು ಬಿಡುತ್ತಿರಲಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಉಮೇಶ ಕತ್ತಿ, ಸುಳ್ಳು ಹೇಳಿಕೆ ಕೊಡುವದನ್ನು ಸಿದ್ದರಾಮಯ್ಯ ನಿಲ್ಲಿಸಬೇಕು. ಮಾಜಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಇತಿಮಿತಿಯಲ್ಲಿ ಸರ್ಕಾರ ಎಲ್ಲಿ ಎಡವುತ್ತಿದೆ, ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಚರ್ಚೆಸೋಣ. ಅದರ ಹೊರತಾಗಿ 40/50 ಪರ್ಸೆಂಟ್ ಎಂದು ಹೇಳಿಕೆ ನೀಡುವದು ಸರಿಯಲ್ಲ. ಇಂಥ ವಿರೋಧ ಪಕ್ಷದ ನಾಯಕರನ್ನು ರಾಜ್ಯ ಎಂದೂ ಪಡೆದಿಲ್ಲ.
ಸಿದ್ಧರಾಮಯ್ಯ ಇಂಥಹ ಹೇಳಿಕೆ ನೀಡುವದನ್ನು ಕೈಬಿಡಬೇಕು. ಈಗ ಲೋಕಾಯುಕ್ತ ರಚನೆಯಾಗಿದೆ. ಸಿಬಿಐ, ಇ.ಡಿ ತನಿಖಾ ಸಂಸ್ಥೆಗಳಿವೆ. ಇನ್ನೂ ಎಲ್ಲಿಯಾದರೂ ಕೆಂಪಯ್ಯ ಅಥವಾ ಸಿದ್ಧರಾಮಯ್ಯ ಯಾರು ಬೇಕಾದರೂ ದೂರು ಕೊಡಲಿ. ಅದರ ಹೊರತಾಗಿ ಸುಳ್ಳು ಹೇಳಿಕೆಗಳನ್ನು ನೀಡುವ ಕೆಲಸ ಕೈಬಿಡಿ ಎಂದು ಉಮೇಶ ಕತ್ತಿ ಒತ್ತಾಯಿಸಿದರು.
ಎಲ್ಲರ ಸರ್ಕಾರ್ ದಲ್ಲೂ ಭ್ರಷ್ಟಾಚಾರಗಳಿವೆ. ಎಲ್ಲವೂ ನಿಜವೇ. ಕುಮಾರಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡುವದಿದ್ದರೂ ಮೊದಲು ದೂರು ಕೊಡಿ. ಮಂತ್ರಿಗಳ ಮೇಲೆ, ನನ್ನ ಮೇಲೇ ಬೇಕಿದ್ದರೂ ದೂರು ಕೊಡಲಿ. ತನಿಖೆಯಾಗಲಿ. ತನಿಖೆಯೇ ನಡೆಯದೆ ಬರಿಯ ಆರೋಪಗಳನ್ನಷ್ಟೇ ಮಾಡುತ್ತಿದ್ದರೆ, ಶಿಕ್ಷೆಯಾಗುತ್ತದೆಯಾ ಎಂದು ಪ್ರಶ್ನಿಸಿದ ಅವರು, ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಿದ್ದರೆ ನಾವೆಲ್ಲಿ ಹೋಗುವದು? ಎಂದರು.
ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹವಾದರೆ ನಾನು ಸಹಿಸುವದಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವದಿಲ್ಲ. ಅದಕ್ಕಾಗಿ ರಾಜೀನಾಮೆಗೂ ಸಿದ್ಧ. ಇದರ ಮುಂದೆ ನಾನೇನೂ ಮಾಡುವಹಾಗಿಲ್ಲ ಎಂದ ಅವರು, ಪ್ರತ್ಯೇಕ ಉತ್ತರ ಕರ್ನಾಟಕದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು. ಯಾವಾಗ ಅಭಿವೃದ್ಧಿ ನಿಲ್ಲುತ್ತದೆಯೋ, ಆಗ ಹೋರಾಟ ಇದ್ದೇ ಇರುತ್ತದೆ. ಅಭಿವೃದ್ಧಿ ನಡೆಯುತ್ತಿದ್ದರೆ ತೊಂದರೆಯಿಲ್ಲ.
ನಾನು ಕರ್ನಾಟಕದ ರಾಜಕಾರಣಿ. ಒಂಭತ್ತು ಬಾರಿ ಎಂಎಲ್ಎ ಆಗಿದ್ದೇನೆ. ಎಂಟು ಬಾರಿ ವಿವಿಧ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದೇನೆ. ಹಾಗಿದ್ದಾಗ ನಮ್ಮವರೇ ಸಿ.ಎಂ ಇದ್ದಾಗ ಮುಖ್ಯಮಂತ್ರಿ ಖುರ್ಚಿಗೆ ಆಸೆ ಪಡುವದಿಲ್ಲ. ಜೀವನದಲ್ಲಿ ಅಂಥ ಅವಕಾಶ ಅದಾಗಿಯೇ ಬಂದರೆ ನನ್ನ ನಸೀಬು ಎಂದುಕೊಳ್ಳುತ್ತೇನೆಯೇ ಹೊರತು ನಾನಾಗಿಯೇ ಬೆನ್ನು ಹತ್ತಿ ಹೋಗುವದಿಲ್ಲ ಎಂದರು.
ಉತ್ತರ ಕರ್ನಾಟಕ ಮುಖ್ಯಮಂತ್ರಿ ನಾನಾಗುವದಿಲ್ಲ. ಅಖಂಡ ಕರ್ನಾಟಕ ಸಿ.ಎಂ ಆಗುವ ಯೋಗ್ಯತೆ ನನಗಿದೆ. ಆದರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು. ಮುಖ್ಯ ನಸೀಬು ಬೇಕ್ರೀ. ನೀವು ಹೇಳಿದಿರೆಂದು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೈಕಮಾಂಡ್ ಅವಕಾಶ ಕೊಟ್ಟರೆ ನೋಡೋಣ. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ. ನೋಡೋಣ ಬಿಡಿ ಎಂದು ಚಟಾಕಿ ಹಾರಿಸಿದರು.