ವಿಜಯಸಾಕ್ಷಿ ಸುದ್ದಿ, ಗದಗ
ಸೋಮವಾರ ರಾತ್ರಿ ಸುರಿದ ರಣರಕ್ಕಸ ಮಳೆಗೆ ಗದಗ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ.
ಗದಗ-ಬೆಟಗೇರಿಯ ಅವಳಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚರಂಡಿ ತುಂಬಿ, ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಸಾಮಾನ್ಯವಾಗಿತ್ತು. ಗಂಗಿಮಡಿ ಆಶ್ರಯ ಕಾಲೋನಿ, ಬೆಟಗೇರಿಯ ಭಜಂತ್ರಿ ಅವರ ಓಣಿ, ಕನ್ಯಾಳ ಅಗಸಿ, ಮಂಜುನಾಥ್ ನಗರ, ಬಸ್ ನಿಲ್ದಾಣ ಸಂಪೂರ್ಣ ನೀರಿನಿಂದ ಜಲಾವೃತವಾಗಿತ್ತು. ಬಸ್ ನಿಲ್ದಾಣದ ಪಕ್ಕದ ಮಾರುಕಟ್ಟೆಗೆ ರಾಜಕಾಲುವೆಯ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿ ಆಗಿತ್ತು.
ಬೆಟಗೇರಿಯ ಬಸ್ ನಿಲ್ದಾಣದಿಂದ ಶರಣಬಸವೇಶ್ವರ ನಗರಕ್ಕೆ ಸಂಚರಿಸಲು ಜನ ಪರದಾಡಿದರು.
ಮನೆಗೆ ನೀರು ನುಗ್ಗಿದ್ದರಿಂದ ಮಕ್ಕಳು, ವೃದ್ಧರು ಪರದಾಡಿದರು. ಮನೆಯಲ್ಲಿದ್ದ ದವಸ ಧಾನ್ಯಗಳು, ಮಾಡಿದ ಅಡುಗೆಯೂ ನೀರು ಪಾಲಾಗಿ ಕೆಲವರು ರಾತ್ರಿ ಉಪವಾಸ, ವನವಾಸ ಅನುಭವಿಸಿದರು.
ರಾಜೀವಗಾಂಧಿ ನಗರದ ನೆಲ್ಸನ್ ಮಂಡೇಲಾ ಸ್ಕೂಲ್ ಬಳಿಯ ಮನೆಗಳಿಗೂ ನೀರು ನುಗ್ಗಿದ್ದರಿಂದ ಜನ ಹೈರಾಣಾದರು. ನೀರು ಹೊರ ಹಾಕಲು ಹರಸಾಹಸ ಪಟ್ಟ ಜನರು, ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದಗ-ಬೆಟಗೇರಿ ಅವಳಿ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮುಳಗುಂದ ನಾಕಾ ಬಳಿಯ ಪಿಬ್ಲ್ಯೂಡಿ ವಸತಿ ನಿಲಯಗಳ ಪಕ್ಕದ ಮನೆಗಳಿಗೂ ನೀರು ನುಗ್ಗಿದೆ. ಬೆಟಗೇರಿಯ ರಾಜಕಾಲುವೆಯ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಜಗಳ ಗಲ್ಲಿ, ಬಸ್ ನಿಲ್ದಾಣದ ಹಿಂಬಾಗ ಲಕ್ಷ್ಮಿ ಚಾಳ, ಎಸ್ ಎಮ್ ಕೃಷ್ಣ ನಗರ ಸೇರಿದಂತೆ ಅನೇಕ ಬಡಾವಣೆಯಲ್ಲಿ ನೀರು ನಿಂತಿದೆ. ಸ್ಟೇಷನ್ ರಸ್ತೆ, ಮಹಾವೀರ ಕಾಲೋನಿಯಲ್ಲಿ ಕೂಡ ನೀರು ನಿಂತಿದೆ.
16ನೇ ವಾರ್ಡ್‌ನಲ್ಲೂ ಕೆಲ ಮನೆಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ.
ಲಕ್ಷ್ಮೇಶ್ವರದಲ್ಲೂ ವರುಣನ ಅರ್ಭಟಕ್ಕೆ ಜನ ನಲುಗಿದ್ದ, ರಾತ್ರಿಯಿಡೀ ಸಂಕಷ್ಟ ಅನುಭವಿಸಿದ್ದಾರೆ. ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪಟ್ಟಣದ ನಿರಾಶ್ರಿತರಿಗೆ ಅಂಜುಮನ್ ಏ ಇಸ್ಲಾಂ ಸಂಸ್ಥೆ ಹಾಗೂ ದೂದಪೀರಾ ದರ್ಗಾ ಕಮಿಟಿ ಅವರು ತಾತ್ಕಾಲಿಕ ಆಶ್ರಯ ಒದಗಿಸಿ ಮಾನವೀಯತೆ ಮೆರದಿದ್ದಾರೆ.
ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಕೆರೆ ಕೋಡಿ ಒಡೆದು ಮನೆಗೆ ನೀರು ನುಗ್ಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೊಂಬಳದಲ್ಲೂ ರೈತರ ಬೆಳೆದ ಮೆಣಸಿನಕಾಯಿ, ಈರುಳ್ಳಿ, ಸೇರಿದಂತೆ ಅನೇಕ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿದ್ದು, ಹಿರೇಹಂದಿಗೋಳಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ ರಸ್ತೆ ಕಿತ್ತು ಹೋಗಿದೆ.
ತೇಲಿಹೋದ ಬಣವೆಗಳು
ಮಳೆ ಜನರಿಗಷ್ಟೇ ಅಲ್ಲ. ರೈತರಿಗೂ ಸಂಕಷ್ಟ ತಂದಿದೆ. ಗದಗ ತಾಲೂಕಿನ ಮದಗಾನೂರು ಗ್ರಾಮದ ಅಕ್ಕಪಕ್ಕದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ರೈತರ ಜಮೀನುಗಳಲ್ಲಿ ಹಾಕಿದ್ದ ಹೊಟ್ಟು ಮೇವಿನ ಬಣವೆಗಳು, ರೈತರ ಎದುರೇ ನೀರಲ್ಲಿ ತೇಲಿ ಹೋಗಿದ್ದು, ರೈತರ ಜಂಘಾಬಲವೇ ಉಡುಗಿ ಹೋಗಿದೆ. ಒಟ್ನಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಜನರಿಗೆ, ರೈತ ಸಮುದಾಯಕ್ಕೆ ಸಾಕಷ್ಟು ಸಂಕಷ್ಟ ತಂದಿದೆ.
ಜಿಲ್ಲೆಯ ಡಂಬಳ, ಶಿರಹಟ್ಟಿ ತಾಲೂಕಿನ ಮಜ್ಜೂರು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಈ ನೀರು ಬನ್ನಿಕೊಪ್ಪ ಗ್ರಾಮದಲ್ಲಿ ಸಂಕಷ್ಟ ತಂದಿದ್ದು, ಹಳ್ಳ ತುಂಬಿ ಹರಿಯುತ್ತಿದ್ದು, ಕೆಲ ಮನೆಗಳು ಜಲಾವೃತಗೊಂಡಿವೆ. ಬನ
ನಗರಸಭೆ ಅಧ್ಯಕ್ಷೆ ದಾಸರ ಭೇಟಿ
ಮಳೆಯ ರುದ್ರನರ್ತನದ ನಂತರ ಜನರ ಸಂಕಷ್ಟ ಕೇಳಲು ರಾತ್ರಿಯೇ ನಗರ ಸಂಚರಿಸಿ ಜನರ ಸಂಕಷ್ಟ ಆಲಿಸಿ ಸಾಂತ್ವನ ಹೇಳಿದರು.
