ವಿಜಯಸಾಕ್ಷಿ ಸುದ್ದಿ, ಗದಗ
ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಹಲವು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಗದಗ ನಗರದ ಮುಳಗುಂದ ರಸ್ತೆಯ ದೋಭಿಘಾಟ್ ತಾತ್ಕಾಲಿಕ ಸೇತುವೆ ಕಿತ್ತುಕೊಂಡು ಹೋಗಿದ್ದು, ಸಂಪರ್ಕ ಸಂಪೂರ್ಣ ಬಂದಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಪಾರ್ಶ್ವನಾಥ್ ಆಂಗ್ಲ ಮಾಧ್ಯಮ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ನಾಗಾವಿ ಬಳಿಯೂ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಸಂಪರ್ಕ ಬಂದಾಗಿದೆ.

ಇನ್ನೂ ಜಿಲ್ಲೆಯ ರೋಣ ತಾಲೂಕಿನ ಬೆಳಗೋಡ ಗ್ರಾಮದ ಇಬ್ಬರು ರೈತರು, ಜಮೀನಿನಲ್ಲಿ ಸಿಲುಕಿಕೊಂಡಿದ್ದು, ಸುತ್ತಲೂ ಮಳೆ ನೀರಿನ ಪ್ರವಾಹ ಉಂಟಾಗಿದೆ. ಪಕ್ಕದ ಹಳ್ಳದಲ್ಲಿ ಕೂಡ ನೀರಿನ ಸೆಳೆತ ಜಾಸ್ತಿಯಾಗಿ ಶರಣಪ್ಪ ಹಾಗೂ ಮಹಾಂತೇಶ್ ಎಂಬ ರೈತರಿಗೆ ಜಮೀನಿನ ಶೆಡ್ ನಿಂದ ಹೊರಬರಲು ಸಾಧ್ಯವಾಗಿಲ್ಲ.
ಹೀಗಾಗಿ ಕುಟುಂಬದ ಸದಸ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.