ವಿಜಯಸಾಕ್ಷಿ ಸುದ್ದಿ, ಗದಗ
ವ್ಯಕ್ತಿಯೊಬ್ಬ ನಗರದ ಆಭರಣಗಳ ಅಂಗಡಿಗೆ ಹೋಗಿ, ತಾನು ಐ.ಟಿ. ಅಧಿಕಾರಿಯೆಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿ ದುಡ್ಡು ಕೊಡದೇ ಮೋಸ ಮಾಡಿರುವ ಬಗ್ಗೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.20ರಂದು ಸಂಜೆ 6.30ರ ಸುಮಾರಿಗೆ ನಗರದ ಸ್ಟೇಷನ್ ರಸ್ತೆಯ ಎಸ್ ಬಿ ಐ ಬ್ಯಾಂಕ್ ಎದುರಿಗಿರುವ ಲೀಲಾ ಲೆಹರ್ ಗೋಲ್ಡ್ ಪ್ಯಾಲೇಸ್ ಆಭರಣಗಳ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿಯು, ತನ್ನ ಹೆಸರು ಅನುದೀಪ್ ಕುಮಾರ್ ಎಂತಲೂ, ತಾನು ಗದಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
ನಂತರ ತನಗೆ ಬಂಗಾರದ ಆಭರಣಗಳನ್ನು ಖರೀದಿಸಬೇಕಾಗಿದೆ ಎಂದು ತಿಳಿಸಿ 24.070 ಗ್ರಾಂ. ತೂಕದ 1,33,740.ರೂ. ಬೆಲೆಬಾಳುವ ಬಂಗಾರದ ಚೈನ್, 5.61 ಗ್ರಾಂ. ತೂಕದ 31,730 ಬೆಲೆಬಾಳುವ ಕಪಲ್ ರಿಂಗ್, 4.20 ಗ್ರಾಂ. ತೂಕವಿರುವ 23,750 ರೂ.ಬೆಲೆಯ ಒಂದು ಕಪಲ್ ರಿಂಗ್ ಸೇರಿ ಒಟ್ಟೂ 1,89,220ರೂ. ಬೆಲೆಯ 33.880 ಗ್ರಾಂ. ತೂಕದ ಬಂಗಾರದ ಆಭರಣಗಳನ್ನು ಖರೀದಿಸಿದ್ದಾನೆ.
ಬಿಲ್ ಹಣವನ್ನು ನೀಡುವಾಗ ಆರೋಪಿಯು ಆರ್ಟಿಜಿಎಸ್ ಮೂಲಕ ಹಣ ಪಾವತಿಸುವದಾಗಿ ಹೇಳಿ ಅಂಗಡಿ ಮಾಲಕರ ಎಸ್ ಬಿ ಐ ಬ್ಯಾಂಕ್ ಖಾತೆಯ ವಿವರ ಪಡೆದು, ಖಾತೆಗೆ ಹಣ ಹಾಕದೇ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣೆಯ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.