ಗ್ಯಾರಂಟಿ ಯೋಜನೆಗಳು ರಾಷ್ಟ್ರದಲ್ಲೇ ಜನಮನ್ನಣೆ ಪಡೆದಿವೆ; ಸಚಿವ ಎಚ್.ಕೆ.ಪಾಟೀಲ

0
Spread the love

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು…..

Advertisement

ಯೋಜನೆ ಜಾರಿಯಲ್ಲಿ ವಿಳಂಬ…ಉದಾಸೀನ ತೋರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮದ ಎಚ್ಚರಿಕೆ……

ವಿಜಯಸಾಕ್ಷಿ ಸುದ್ದಿ, ಗದಗ

ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಿಂದ ಬಡವರ ಬದುಕು ಚೇತರಿಕೆಯಾಗುತ್ತದೆ. ಇಂತಹ ಪ್ರಮುಖ ಗ್ಯಾರಂಟಿಗಳು ರಾಷ್ಟ್ರದಲ್ಲಿಯೇ ಜನಮನ್ನನೆಗೆ ಪಾತ್ರವಾಗಿವೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಡವರ ಕಲ್ಯಾಣ ಹಾಗೂ ಆರ್ಥಿಕ ಚೇತರಿಕೆಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಘೋಷಿಸಿದಂತೆ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳು ಕಾರ್ಯಪೃವತ್ತರಾಗುವಂತೆ ಅವರು ಹೇಳಿದರು.

ಈ ಐದು ಗ್ಯಾರಂಟಿಗಳ ಅನುಷ್ಠಾನದಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ ನಾಲ್ಕರಿಂದ ಐದು ಸಾವಿರ ಧನ ಸಹಾಯ ದೊರೆತಂತಾಗುತ್ತದೆ. ಈ ಯೋಜನೆಗಳು ಉಚಿತ ಯೋಜನೆಗಳೆಲ್ಲಾ ಬಡವರ ಕಲ್ಯಾಣ ಕಾರ್ಯಕ್ಕೆ ಅವಶ್ಯಕವಾದ ಯೋಜನೆಗಳಾಗಿವೆ. ಇವುಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಗದಗ ಜಿಲ್ಲೆ ಐದು ಗ್ಯಾರಂಟಿಗಳ ಅನುಷ್ಠಾನದ ಪ್ರಗತಿಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಚಿವ ಎಚ್. ಕೆ. ಪಾಟೀಲ ಸೂಚಿಸಿದರು.

ಶಕ್ತಿ ಯೋಜನೆಯಡಿ ಜೂನ 11 ರಿಂದ 30ರ ವರೆಗೆ ಶೇ. 56 ರಷ್ಟು ಹಾಗೂ ಜುಲೈ 1ರಿಂದ 8 ರ ವರೆಗೆ ಮಹಿಳೆಯರು ಶೇ.೬೦ ರಷ್ಟು ಪುರುಷರು ಶೇ.40 ರಷ್ಟು ಪ್ರಯಾಣಿಸಿದ್ದಾರೆ. ಜೂನ್. 11 ರಿಂದ 30 ರ ವರೆಗೆ 8.10 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದರೇ, ಜುಲೈ 1 ರಿಂದ 8 ರ ವರೆಗೆ 3.64 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ಎ.ಎ.ವಾಯ್ ಹಾಗೂ ಬಿ.ಪಿ.ಎಲ್. ಹೊಂದಿರುವ 2,56,500 ಕಾರ್ಡದಾರರಿದ್ದು ಇದರಲ್ಲಿ ಮಹಿಳೆ ಯಜಮಾನಿಯಾಗಿರುವ 2,35,633 ಕಾರ್ಡುಗಳು ಹಾಗೂ ಪುರುಷರು ಯಜಮಾನರಾಗಿರುವ 19,611 ಕಾರ್ಡುಗಳಿವೆ. ಮಹಿಳೆ ಹಾಗೂ ಪುರುಷರು ಇವರ್ಯಾರು ಯಜಮಾನನಲ್ಲದ 1,256 ಕಾರ್ಡುಗಳು ಇವೆ ಎಂದು ಗುರುತಿಸಲಾಗಿದೆ.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2,89,207 ಸಂಪರ್ಕಗಳಿದ್ದು ಈ ಪೈಕಿ 1,80,954 ಸಂಪರ್ಕಗಳ ನೋಂದಣಿಯಾಗಿದೆ. ಶೀಘ್ರವೇ ಉಳಿದ ಸಂಪರ್ಕಗಳನ್ನು ನೋಂದಣಿ ಮಾಡಿಸಲಾಗುವದು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ನೋಂದಣಿ ಕಾರ್ಯ ಮಾಡಲಾಗುವುದು.

ಗೃಹಲಕ್ಷ್ಮೀ ಯೋಜನೆಯನ್ನು ಸಹ ಸರ್ಕಾರದ ಮಾರ್ಗಸೂಚಿಯಂತೆ ಶೀಘ್ರವಾಗಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸರ್ಕಾರದ ಈ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಅಧಿಕಾರಿಗಳಿಂದ ವಿಳಂಬ ನೀತಿ ಹಾಗೂ ಉದಾಸಿನತೆ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಗಂಭೀರವಾದ ಕ್ರಮಗಳನ್ನು ಜರುಗಿಸಲಾಗುವದು. ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿರಬೇಕು. ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರಿಗೆ ಸರ್ಕಾರದ ಗ್ಯಾರಂಟಿಗಳ ಸೌಲಭ್ಯ ನಿಗದಿತ ಅವಧಿಯೊಳಗೆ ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ-ಬೆಟಗೇರಿ ನಗರಸಭೆಯಲ್ಲಿ ಫಾರಂ.ನಂ.3 ವಿರಣೆಯಲ್ಲಿ ವಿಳಂಭವಾಗುತ್ತಿರುವ ಕುರಿತು ಮಾಹಿತಿ ಪಡೆದು ಮಾತನಾಡಿ, ಒಂದು ವಾರದೊಳಗಾಗಿ ಬಾಕಿ ಇರುವ ಫಾರಂ. ನಂ. 3 ಅರ್ಜಿಗಳು ಇತ್ಯರ್ಥವಾಗಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವಾಯ್.ಶೆಟ್ಟಪ್ಪನವರ, ವಾ.ಕ.ರಾ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಕ ಶೀನಪ್ಪ, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಬಸವರಾಜ ಮಲ್ಲೂರ, ರವಿ ಗುಂಜಿಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here