ವಿಜಯಸಾಕ್ಷಿ ಸುದ್ದಿ, ಗದಗ:
ರಾಜ್ಯದಲ್ಲಿ ಹಿಜಾಬ್ -ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಈಗಾಗಲೇ ರಾಜ್ಯ ಸರ್ಕಾರ ಫೆ.16 ರವರೆಗೆ ಕಾಲೇಜುಗಳಿಗೆ ರಜೆ ನೀಡಿದೆ. ಇಂದಿನಿಂದ 10ನೇ ತರಗತಿವರೆಗೆ ಶಾಲೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳ, ವಿದ್ಯಾ ಸಂಸ್ಥೆಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ 144 ಕಲಂ ಜಾರಿಗೊಳಿಸಿ ಆದೇಶಿಸಿದ್ದಾರೆ.
ನಿಷೇಧಾಜ್ಞೆ ಜಾರಿ ಹಿನ್ನೆಲೆ ಐದಕ್ಕಿಂತ ಹೆಚ್ಚು ಜನ ಗುಂಪು ಕೂಡುವ ಹಾಗಿಲ್ಲ. ಯಾವುದೇ ರೀತಿಯ ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ರ್ಯಾಲಿ, ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶದಲ್ಲಿ ತಿಳಿಸಿದ್ದಾರೆ.