ಕಲಘಟಗಿ ಮತಕ್ಷೇತ್ರದಲ್ಲಿ ರಂಗೇರುತ್ತಿರುವ ಚುನಾವಣಾ ಅಖಾಡ; ಯಾರು ಹಿತವರು ನಿಮಗೆ, ಈ ಮೂವರೊಳಗೆ..?!

0
Spread the love

ರಾಜು ದಖನಿ

Advertisement

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕಲಘಟಗಿ ವಿಧಾನಸಭಾ ಮತಕ್ಷೇತ್ರ ಧಾರವಾಡ ಜಿಲ್ಲೆಯ ಹೈ ವೊಲ್ಟೇಜ್ ಮತಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿನ ಮತದಾರರ ಸ್ವಭಾವ ಕೂಡ ಅಷ್ಟೇ ವಿಭಿನ್ನವಾಗಿದೆ. ಕಲಘಟಗಿ ಮತಕ್ಷೇತ್ರ ಎಂದರೆ ಲಾಡ್ ಎನ್ನುವಷ್ಟರ ಮಟ್ಟಿಗೆ ಛಾಪು ಮೂಡಿಸಿದವರು ಮಾಜಿ ಸಚಿವ ಸಂತೋಷ ಲಾಡ್. ಆದರೆ, ಅವರ ಕೆಲ ಕಾರ್ಯವೈಖರಿಗೆ ಮತದಾರರು ಬೇಸತ್ತಂತೆ ಕಾಣುತ್ತಿದೆ.

ಈ ನಡುವೆಯೇ ಬಿಜೆಪಿಯಿಂದ ಅತ್ತು-ಕರೆದು, ಮಾಡಬಾರದ ಹೈ ಡ್ರಾಮಾಗಳನ್ನೆಲ್ಲಾ ಮಾಡಿ, ಟಿಕೆಟ್ ಪಡೆದಿದ್ದ ಹಾಲಿ ಶಾಸಕ ನಿಂಬಣ್ಣವರ, ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಾಡ್ ವಿರುದ್ಧ ಭಾರೀ ಅಂತರದಲ್ಲಿ ಗೆದ್ದು ಬೀಗಿದ್ದರು.

ಆದರೆ ಈ ಬಾರಿಯ ಚುನಾವಣೆಗೆ ಆಯಾ ಪಕ್ಷದ ಆಕಾಂಕ್ಷಿಗಳ ತೊಡಕೇ ಹೆಚ್ಚಾಗಿದೆ. ಅದರಲ್ಲೂ ಸಂತೋಷ ಲಾಡ್ ಮಾಜಿ ಶಾಸಕರಾಗಿ ಇದೇ ಕ್ಷೇತ್ರವನ್ನು ಪ್ರತಿನಿಧಿಸುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ನಡುವೆಯೇ, ಮಾಜಿ ಎಂಎಲ್ಸಿ ನಾಗರಾಜ್ ಛೆಬ್ಬಿ ಕೂಡ ಅದೇ ಭಾಗದಲ್ಲಿ ಮನೆ ನಿರ್ಮಾಣ ಮಾಡಿದ್ದಲ್ಲದೆ, ಕಲಘಟಗಿ ಜನರ ನಡುವೆ ಬಿಡುವಿಲ್ಲದಂತೆ ಪ್ರದಕ್ಷಿಣೆ ಪ್ರಾರಂಭಿಸಿದ್ದಾರೆ.

ಆದರೆ ಮೊದಲಿನಿಂದಲೂ ಸ್ಥಳೀಯ ಮಟ್ಟದಲ್ಲಿ ಈ ಇಬ್ಬರೂ ಘಟಾನುಘಟಿ ನಾಯಕರು ಬೇರೊಂದು ಊರಿನಿಂದ ಬಂದವರು ಎನ್ನುವ ಕೂಗು ಬಿಟ್ಟರೆ ಮತ್ಯಾವ ಕೊರತೆಯೂ ಇಲ್ಲ!

ಇವೆಲ್ಲವುಗಳ ನಡುವೆ, ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಬಂಗಾರೇಶ ಹಿರೇಮಠ ಇದೀಗ ಕಲಘಟಗಿ ಮತಕ್ಷೇತ್ರದಲ್ಲಿ ಸದ್ದಿಲ್ಲದೆ ಸಂಚಾರ ಆರಂಭಿಸಿದ್ದಾರೆ. ಧಾರವಾಡ ಜಿಲ್ಲೆಯ ಮಾಜಿ ಸಚಿವ ವಿನಯ ಕುಲಕರ್ಣಿಯವರ ಸಮಕಾಲೀನ ರಾಜಕಾರಣಿ ಬಂಗಾರೇಶ್ ಹಿರೇಮಠ ಈ ಬಾರಿ ಅಜ್ಜ-ಅಮ್ಮನ ಊರಾದ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರು.

ಹಿಂದಿನಿಂದಲೂ ಕಲಘಟಗಿ ಮತಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬಂಗಾರೇಶ್ ಹೀರೆಮಠರು, ಕಲಘಟಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡುತ್ತಿರುವುದು ಇತರರ ನಿದ್ದೆಗೆಡಿಸಿದ್ದಂತೂ ಸತ್ಯ ಎನ್ನುತ್ತಿದ್ದಾರೆ ಸ್ಥಳೀಯ ಮತದಾರ ಪ್ರಭುಗಳು.

ಈ ಬಾರಿಯ ಚುನಾವಣೆಯು ಕಲಘಟಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ, ಭರವಸೆಯ ಮಹಾಪೂರವೇ ಹರಿಯಲಿದ್ದು, ಜನರ ಸಮಸ್ಯೆಗಳು ಎಷ್ಟರ ಮಟ್ಟಿಗೆ ಸುಧಾರಿಸಲಿವೆ ಎಂದು ಕಾದು ನೋಡಬೇಕಿದೆ.


Spread the love

LEAVE A REPLY

Please enter your comment!
Please enter your name here