ಆಹಾರ ಇಲಾಖೆ, ಪೊಲೀಸರ ಜಂಟಿ ಕಾರ್ಯಾಚರಣೆ…
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಪಟ್ಟಣದಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿರುವ ಗೋಡೌನ್ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಅನ್ನಭಾಗ್ಯದ ಅಕ್ಕಿ ಮತ್ತು ಕ್ಷೀರಭಾಗ್ಯದ ಹಾಲಿನ ಪುಡಿಯನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
ತಾಲೂಕು ಅಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹಾಗೂ ಗಜೇಂದ್ರಗಡ ಪಿಎಸ್‌ಐ ಸೋಮನಗೌಡ ಗೌಡ್ರ ನೇತೃತ್ವದಲ್ಲಿ ಎಪಿಎಂಸಿ ಗೋದಾಮೊಂದರಲ್ಲಿ ಅಕ್ರಮ ಅಕ್ಕಿ ಸಂಗ್ರಹಣೆ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ 1 ಕೆಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಹಾಗೂ ಅನ್ನಭಾಗ್ಯ ಅಕ್ಕಿಯನ್ನು ಹೋಲುವ 51 ಚೀಲಗಳಲ್ಲಿರುವ 26.5ಕ್ವಿಂಟಾಲ್ ತೂಕದ 90,100 ರೂ ಮೌಲ್ಯದ ಅಕ್ಕಿ ಚೀಲಗಳು ಸಿಕ್ಕಿವೆ. ಈ ಕುರಿತು ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಎಪಿಎಂಸಿಯ ಗೋದಾಮಿನ ಮೇಲೆ ನಡೆದ ದಾಳಿ ವೇಳೆ 1 ಕೆಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಸಿಕ್ಕಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯದ್ದಾಗಿದೆ. ಗಜೇಂದ್ರಗಡ ನೆರೆಯ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಹತ್ತಿರವಿದ್ದು, ಎಲ್ಲ ಪ್ಯಾಕೆಟ್‌ಗಳ ಬ್ಯಾಚ್ ನಂಬರ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ತಿಳಿಸಿದ್ದಾರೆ.