ಪಾಪದ ಹಣ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು
ವಿಜಯಸಾಕ್ಷಿ ಸುದ್ದಿ, ಗದಗ
ಚಪ್ಪಾಳೆ ಸದ್ದು ಕೇಳಿಸಬೇಕೆಂದರೆ ಎರಡೂ ಕೈಗಳು ಬೇಕು. ಭ್ರಷ್ಟ ರಾಜಕಾರಣಿಗಳನ್ನು ಎಂದೂ ಜನಪ್ರತಿನಿಧಿಗಳನ್ನಾಗಿ ಮಾಡಬಾರದು. ರಾಜಕಾರಣಿಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಮಾಡಬಾರದ ಮಹಾಪರಾಧಗಳನ್ನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿಕೆ ನೀಡಿದರು.
ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ವಿಧಾನಸೌಧದ ಆವರಣದಲ್ಲಿ 10 ಲಕ್ಷ ರೂ. ಹಣ ಪತ್ತೆಯಾದ ವಿಷಯದ ಕುರಿತು ಪ್ರತಿಕ್ರಿಯಿಸಿದರು. ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬದಲಾಗಿ ಸ್ವಾರ್ಥ, ದುರಾಸೆಯೇ ಕೆಲಸವಾಗುತ್ತಿವೆ. ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು. ಆ ಮೂಲಕ ಸಮಾಜಕ್ಕೆ ಸಂದೇಶ ಹೋಗಬೇಕು ಎಂದರು.
ಜನಾರ್ದನ ರೆಡ್ಡಿ ಹಾಗೂ ಅವರ ಪಕ್ಷ ಮಕಾಡೆ ಬೀಳಲಿದೆ. ಅವರಿಗೆ ಯಾವುದೇ ಭವಿಷ್ಯ ಇಲ್ಲ. ಪಾಪದ ಹಣ ಪ್ರಾಯಶ್ಚಿತ್ತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದು. ರೆಡ್ಡಿ ಜನಹಿತ ಮರೆತು, ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ದಿನಕ್ಕೆ 10 ಸಾವಿರ ಟ್ರಕ್‌ನಲ್ಲಿ ಅಕ್ರಮ ಅದಿರು ಕಳುಹಿಸಿದ್ದ ದರೋಡೆಕೋರನಿಗೆ ರಾಜ್ಯದ ಜನ ಏನೂ ಕೊಡಬಾರದು. ಮದ್ಯದ ದೊರೆ ವಿಜಯ ಮಲ್ಯ, ಬಿಎಸ್ ಆರ್ ಕಟ್ಟಿದ್ದ ರಾಮುಲು ಹಾಗೆಯೇ ರೆಡ್ಡಿ ಕೂಡ ಮಕಾಡೆ ಬೀಳಲಿದ್ದಾರೆ.
ಸಿಬಿಐನಿಂದ ರೆಡ್ಡಿ ಆಸ್ತಿ ಜಪ್ತಿ ವಿಷಯ ಬಹಳ ತಡವಾಗಿದೆ. ಅವರ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಬಿಎಸ್ ಯಡಿಯೂರಪ್ಪ ಅವರನ್ನ ರೆಡ್ಡಿ ತಮ್ಮ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ಅವರ ಸಮಗ್ರ ಆಸ್ತಿ ಪೈಸೆಗೆ ಪೈಸಾ ವಾಪಾಸ್ ಬರುವಂತೆ ಮಾಡಬೇಕಿದೆ ಎಂದರು.