ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಕಳ್ಳಬಟ್ಟಿ ಸಾರಾಯಿ ತಯಾರಿಸುವ ಅಡ್ಡೆಯ ಮೇಲೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ನೇತೃತ್ವದಲ್ಲಿ ಅಬಕಾರಿ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ, ಸಾವಿರಾರು ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಜರುಗಿದೆ.
ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಜಮೀನಿನಲ್ಲಿ ಕೆರಳ್ಳಿತಾಂಡಾದ ಸೀತಾರಾಮ ತಂದೆ ಕೃಷ್ಣಪ್ಪ ಲಮಾಣಿ ಎಂಬಾತ ಕಳ್ಳಬಟ್ಟಿ ಸಾರಾಯಿ ತಯಾರಿಸುವ ಸಮಯದಲ್ಲಿ ಮುಂಡರಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ನೇತೃತ್ವದಲ್ಲಿ ಅಬಕಾರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಅಧಿಕಾರಿಗಳು, ಕಳ್ಳಬಟ್ಟಿ ಸಾರಾಯಿ ತಯಾರಿಸಲು ಉಪಯೋಗಿಸುವ ಬೆಲ್ಲದ ಕೊಳೆ, ಕಬ್ಬಿಣದ ಒಲೆ, ಎಚ್ ಪಿ ಕಂಪನಿಯ ಗ್ಯಾಸ್ ಹಾಗೂ ಬೈಕ್ ಸಮೇತ 46,800 ರೂ. ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಕಳ್ಳಬಟ್ಟಿ ತಯಾರಿಸಲು ಸೀತಾರಾಮನಿಗೆ ಜಮೀನು ನೀಡಿರುವ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಈ ಕುರಿತು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 13,13(1)(f),15,32(1),34,38(A) ಹಾಗೂ 43 ಉಲ್ಲಂಘನೆ ಆಗಿದ್ದು, 32/2022-23 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಸುವರ್ಣ. ಬಿ ಕೋಟಿ, ಸಿಬ್ಬಂದಿಗಳಾದ ಹನಮಂತ ಹಳ್ಳಿ, ಹನಮಪ್ಪ ನರೇಗಲ್, ಸದಾನಂದ ಹಡಪದ ಹಾಗೂ ಚಾಲಕ ಅಶೋಕ ರಾಮೇನಹಳ್ಳಿ ಇದ್ದರು.