ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಾಯಕನಹಳ್ಳಿ ಬಳಿಯ ಖಬರಸ್ತಾನದಲ್ಲಿಯ ನೂರಕ್ಕೂ ಹೆಚ್ಚು ಸಮಾಧಿಗಳನ್ನು ರವಿವಾರ ರಾತ್ರಿ ನೆಲಸಮ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಸೌಹಾರ್ದತೆ ಕಾಪಾಡಬೇಕೆಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.
ಕರಾವಳಿ ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ದುಷ್ಕರ್ಮಿಗಳು ಕೃಷ್ಣಾಪುರದ ಜಲೀಲ್ ಎಂಬ ಅಮಾಯಕನನ್ನು ಚಾಕುವಿನಿಂದ ಕೊಲೆ ಮಾಡಿರುವುದು ಸರಣಿ ಕೊಲೆಯ ಮುಂದುವರಿದ ಭಾಗವಾಗಿದ್ದರಿಂದ ನಾಗರಿಕರು ರೋಸಿ ಹೋಗಿದ್ದಾರೆ.
ಪ್ರಭಾವಿಗಳ ಬೆಂಬಲವಿಲ್ಲದೆ ಇಂತಹ ನಿರ್ಭಯವಾಗಿ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಅಮಾಯಕ ಕುಟುಂಬವೊಂದನ್ನು ಅನಾಥವಾಗಿಸಿದ ಈ ಹತ್ಯೆಯನ್ನು ತಾವು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಹುನ್ನಾರಕ್ಕೆ ಆಡಳಿತಯಂತ್ರವೇ ಬೆಂಬಲಕ್ಕೆ ನಿಂತಿದೆ ಎಂಬ ಭಾವನೆ ನಾಗರಿಕರ ಮನಸ್ಸಿನಲ್ಲಿ ಮನೆ ಮಾಡುವಂತಹ ಸನ್ನಿವೇಶವುಂಟಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕಕಾರಿಯಾಗಿದೆ.
ಇಂತಹ ಬೆಳವಣಿಗೆಯಿಂದ ವ್ಯವಸ್ಥೆಯ ಮೇಲಿನ ಭರವಸೆ ಕುಸಿದು ಹೋಗಿದೆ. ಹತ್ಯೆಯಾದ ಜಲೀಲ್ ಮನೆಗೆ ಹಾಗೂ ಫಾಝಿಲ್ ಮನೆಗೆ ತಾವು ತಕ್ಷಣ ಭೇಟಿ ಕೊಟ್ಟು ಸಾಂತ್ವನ ಹೇಳಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ಮತ್ತೆ ಮರುಸ್ಥಾಪಿಸಬೇಕು.
ನೈಜ ಆರೋಪಿಗಳನ್ನು ಬಂಧಿಸಿ ಅಪರಾಧ ಸಂಹಿತೆಯ ಕಠಿಣ ಕಾಲಂನಡಿಯಲ್ಲಿ ಕೇಸು ದಾಖಲಿಸಬೇಕು. ಆರೋಪಿಗಳಿಗೆ ಬೆಂಬಲ ನೀಡುತ್ತಿರುವ ಶಕ್ತಿಗಳನ್ನು ಮಟ್ಟ ಹಾಕಬೇಕು. ಹತ್ಯೆಯಾದ ಜಲೀಲ್ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮುಖ್ಯಮಂತ್ರಿಗಳಾದ ತಾವು ನಮಗೆ ಯಾವುದೇ ರಾಜಕೀಯ ಲಾಭದ ದುರುದ್ದೇಶ ಇಲ್ಲ ಎಂಬುದನ್ನು ಮನಗಂಡು ನಮ್ಮ ಹಕ್ಕೊತ್ತಾಯಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ. ಕೊಲೆಗೆ ಪ್ರತಿ ಕೊಲೆ ನಿಲ್ಲಲಿ.
ಕೊಲೆಗಡುಕರು ಯಾವುದೇ ಧರ್ಮದ ವಕ್ತಾರರಲ್ಲ. ದೇಶಪ್ರೇಮಿಗಳೇ ಒಂದಾಗಿ. ಮಾನವೀಯತೆಗೆ ಮುಂದಾಗಿ. ನಾಡಿನ ಶಾಂತಿ ಬಯಸುವವರೇ ನಮ್ಮೊಂದಿಗೆ ಕೈಜೋಡಿಸಿ. ಹೊಸಪೇಟೆ ತಾಲೂಕಿನ ಕೊಂಡನಾಯಕನಹಳ್ಳಿ ಬಳಿಯ ಖಬರಸ್ತಾನದಲ್ಲಿಯ ನೂರಕ್ಕೂ ಹೆಚ್ಚು ಸಮಾಧಿಗಳನ್ನು ರವಿವಾರ ರಾತ್ರಿ ನೆಲಸಮ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕೋಮು ಸೌಹಾರ್ದತೆ ಕಾಪಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್.) ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ರಾಶೀದ್ ಖಾಝಿ, ಜಿಲ್ಲಾ ಕಾರ್ಯದರ್ಶಿ ಮೌಲಾನಾ ನೌಫಲ್ ಮರ್ಝೂಖಿ ರಬ್ಬಾನಿ, ಮೌಲಾನಾ ಸಫ್ವಾನ್ ಹನೀಫಿ ಪಕ್ಷಿಕೆರೆ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಅಬ್ದುಲ್ ಕವಲೂರ್, ರಾಜಾ ಸಾಬ್ ಇಟಗಿ ಇದ್ದರು.