ಪೂರ್ಣಪ್ರಮಾಣದ ಸೌಲಭ್ಯಗಳಿಗಾಗಿ ಆಗ್ರಹ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ೫ ವರ್ಷ ಕಳೆಯುತ್ತಾ ಬಂದರೂ ತಹಸೀಲ್ದಾರ ಕಚೇರಿ ಹೊರತುಪಡಿಸಿ ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು, ಸಿಬ್ಬಂದಿ ಮತ್ತು ಪ್ರತ್ಯೇಕ ಬಜೆಟ್ ಇಲ್ಲದ್ದರಿಂದ ತಾಲೂಕು ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
೨೦೧೭ ರ ಕೊನೆಗೆ ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೋಷಣೆಯಾಗಿ ಇದುವರೆಗೂ ಸೋರುತ್ತಿರುವ ಎಪಿಎಂಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದ ತಹಸೀಲ್ದಾರ ಕಚೇರಿ ಇದೀಗ ಸಣ್ಣದಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಭೂದಾಖಲೆಗಳ ಕೊಠಡಿ ಸ್ಥಳಾಂತಗೊಳ್ಳದ್ದರಿಂದ ಮತ್ತು ಸ್ಥಳಾಂತರಗೊಳ್ಳಲು ಭದ್ರವಾದ ಸ್ಥಳಾವಕಾಶ ಇಲ್ಲದ್ದರಿಂದ ಭೂ ದಾಖಲೆಗಾಗಿ ಶಿರಹಟ್ಟಿಗೆ ಅಲೆಯಬೇಕಾದ ಪರಿಸ್ಥಿತಿ ತಪ್ಪಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರತ್ಯೇಕ ತಾಲೂಕು ಪಂಚಾಯತಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದರೂ ಸಿಬ್ಬಂದಿ, ಕಟ್ಟಡ, ಅನುದಾನ ಇಲ್ಲದ್ದರಿಂದ ಇದೂ ಸಹ ತಹಸೀಲ್ದಾರ ಕಚೇರಿಗೆ ಹೊರತಾಗಿಲ್ಲ ಎನ್ನಬಹುದು.
ಯಾವ ತಾಲೂಕು ಕಚೇರಿಗಳಿಲ್ಲ?
ಮುಖ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಆರಕ್ಷಕ, ಸಮಾಜ ಕಲ್ಯಾಣ ಇಲಾಖೆ, ಭೂದಾಖಲೆ ಮತ್ತು ಮಾಪನ ಇಲಾಖೆ, ಬಿಸಿಎಂ, ಪಿಡಬ್ಲ್ಯೂಡಿ, ಆರೋಗ್ಯ, ರೇಷ್ಮೆ, ಅರಣ್ಯ(ಸಾಮಾಜಿಕ ಮತ್ತು ಪ್ರಾದೇಶಿಕ), ಕೃಷಿ, ತೋಟಗಾರಿಕೆ, ಅಬಕಾರಿ, ಜಲಾನಯನ ಸೇರಿ ಬಹುತೇಕ ಇಲಾಖೆಗಳಿಲ್ಲದ್ದರಿಂದ ಆಯಾ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು, ನೌಕರರು ಶಿರಹಟ್ಟಿ ತಾಲೂಕಿಗೆ ಅಲೆದಾಡಬೇಕಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಕೆಲ ತಾಲೂಕು ಕಚೇರಿಗಳು ಧೂಳು ತಿನ್ನುತ್ತಿದ್ದು, ಹಾಕಿದ ಬೀಗ ತುಕ್ಕು ಹಿಡಿದಿವೆ ಎನ್ನಲಾಗಿದೆ.
ಆಗ್ರಹ
ಲಕ್ಷ್ಮೇಶ್ವರ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವಂತಾಗಬೇಕು ಮತ್ತು ಮಿನಿ ವಿಧಾನಸೌಧ ನಿರ್ಮಾಣವಾಗಬೇಕು.
ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಬೇಕು. ಗದಗ-ಯಲವಗಿ ರೇಲ್ವೆ ಮಾರ್ಗ ಕಾರ್ಯಾರಂಭಗೊಳ್ಳುವಂತಬೇಕು. ಲಕ್ಷ್ಮೇಶ್ವರಕ್ಕೆ ತುಂಗಭದ್ರಾ ಕುಡಿಯುವ ನೀರಿನ ಪ್ರತ್ಯೇಕ ಯೋಜನೆ ಕಲ್ಪಿಸಬೇಕು. ಹೊಸ ಪದವಿ, ಪಪೂ, ವಸತಿಯುವ ಶಾಲೆಗಳು, ಹಾಸ್ಟೆಲ್‌ಗಳು ಸ್ಥಾಪನೆಯಾಗಬೇಕು. ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಬೇಕು. ತಾಲೂಕಾ ಆಸ್ಪತ್ರೆ, ಕ್ರೀಡಾಂಗಣ ನಿರ್ಮಾಣವಾಗಬೇಕು.
ಲಕ್ಷ್ಮೇಶ್ವರ ಸೇರಿ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಬೇಕು, ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಅನುದಾನದ ಕೊರತೆಯಿಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ. ಅದಕ್ಕಾಗಿ ವಿಶೇಷ ಅನುದಾನ ಕಲ್ಪಿಸಬೇಕು, ಎಂಬಿತ್ಯಾದಿ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂಬುದು ಲಕ್ಷ್ಮೇಶ್ವರ ಭಾಗದ ಜನರ ಒತ್ತಾಸೆಯಾಗಿದೆ ಎಂದು ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಆಗ್ರಹಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೋಷಣೆ ಮಾಡಿ ಕೈ ತೊಳೆದುಕೊಂಡಿರುವ ಸರ್ಕಾರ ಅವಶ್ಯಕ ಕಚೇರಿ, ಸಿಬ್ಬಂದಿ, ಬಜೆಟ್ ನೀಡುವ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಲಕ್ಷ್ಮೇಶ್ವರ ತಾಲೂಕು ಜಿಲ್ಲೆಯಲ್ಲಿಯೇ ಶಿಕ್ಷಣ, ವಾಣಿಜ್ಯ, ಕೃಷಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ೫೦ ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಸೇರಿ ೩೮ ಗ್ರಾಮಗಳ ಜನರು ಸರ್ಕಾರಿ ಕೆಲಸಕ್ಕಾಗಿ ಶಿರಹಟ್ಟಿಗೆ ಅಲೆಯುವುದು ತಪ್ಪದಂತಾಗಿದೆ. ನೆರೆಯ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಪ ಸದಸ್ಯರು ಜವಾಬ್ದಾರಿಯುತವಾದ ಕಾರ್ಯಕ್ಕೆ ಮುಂದಾಗಬೇಕು.
-ಪದ್ಮರಾಜ ಪಾಟೀಲ್, ಜೆಡಿಎಸ್ ತಾಲೂಕಾ ಅಧ್ಯಕ್ಷ
ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಭೂದಾಖಲೆಗಳ ಸಂಗ್ರಹ-ಸಂರಕ್ಷಣೆಗೆ ಸೂಕ್ತವಾದ ಸ್ಥಳಾವಕಾಶದ ಕೊರತೆಯಿಂದ ಭೂದಾಖಲೆಗಾಗಿ ಶಿರಹಟ್ಟಿಗೆ ಹೋಗಬೇಕಾಗಿದೆ. ಹೊಸ ತಾಲೂಕಿಗೆ ಶಿಕ್ಷಣ, ಭೂಮಾಪನ, ಕೃಷಿ, ಆರೋಗ್ಯ ಸೇರಿ ಎಲ್ಲ ತಾಲೂಕು ಕಚೇರಿಗಳ ಕಾರ್ಯಾರಂಭದ ಬಗ್ಗೆ ವರದಿ ಮತ್ತು ಸಾರ್ವಜನಿಕರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗಿದೆ.
-ಪರಶುರಾಮ ಸತ್ತಿಗೇರಿ, ತಹಸೀಲ್ದಾರ್, ಲಕ್ಷ್ಮೇಶ್ವರ